ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ... ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

dowry case
Published on

ಬೆಂಗಳೂರು: ತವರು ಮನೆಯಿಂದ ಹಣ ತರುವಂತೆ ಇತ್ತ ಪತಿ ಕಿರುಕುಳ ಕೊಡುತ್ತಿದ್ದಾನೆ. ಅತ್ತ ತನ್ನ ಚಪಲ ತೀರಿಸಬೇಕೆಂದು ಮಾವ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂದು 24 ವರ್ಷದ ಯುವತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ.

ಕೋರಮಂಗಲ ನಿವಾಸಿ ಹರೀಶ್(31) 2016ರ ಏ.25ರಂದು ದೂರುದಾರ ಮಹಿಳೆಯನ್ನು ವಿವಾಹವಾಗಿದ್ದ. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರೂ ಕೆಲ ವರ್ಷಗಳ ಬಳಿಕ ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ತವರು ಮನೆಯಿಂದ 10 ಲಕ್ಷ ರೂಪಾಯಿ ತರುವಂತೆ ಗಂಡ ಕಿರುಕುಳ ಕೊಡುತ್ತಿದ್ದ. ಗಂಡನ ವರ್ತನೆಯಿಂದ ನೊಂದಿದ್ದ ಗೃಹಿಣಿ ಮೇಲೆ ಮಾವನ ಕಾಮದ ಕಣ್ಣು ಬಿದ್ದಿತ್ತು. ಮಗ ಮನೆಯಲ್ಲಿ ಇಲ್ಲದ ವೇಳೆ ಮಾವ ರಾಮಕೃಷ್ಣ ಸೊಸೆ ಬಳಿ ಬಂದು, ನಿನಗೆ ಏನೇ ಸಹಾಯ ಬೇಕಾದರೂ ಮಾಡುತ್ತೇನೆ. ನನ್ನ ಆಸೆಗಳನ್ನು ತೀರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದ. ಸ್ನಾನ ಮಾಡುವ ಸಮಯದಲ್ಲಿ ಬಲವಂತವಾಗಿ ಬಾಗಿಲು ತೆಗೆಸುವುದು, ಬಾಗಿಲು ತೆಗೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿ ಕಿರುಕುಳ ಕೊಡುತ್ತಿದ್ದ. ಬಟ್ಟೆ ಬದಲಾಯಿಸುವ ಸಮಯಲ್ಲಿ ರೂಂನೊಳಗೆ ಬರಲು ಯತ್ನಿಸುತ್ತಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

ತವರಿನಿಂದ 10 ಲಕ್ಷ ರೂ. ತರುವಂತೆ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಗಂಡ, ವರದಕ್ಷಿಣೆ ತರದಿದ್ದರೆ ಬದುಕಲು ಅವಕಾಶ ಕೊಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದೂ ವಿವರಿಸಲಾಗಿದೆ. ಹೆಚ್ಚಿನ ವರದಕ್ಷಿಣೆ ಪಡೆದು ಬೇರೆ ಮದುವೆ ಮಾಡಿಕೋ ಎಂದು ನನ್ನ ಗಂಡನಿಗೆ ಆತನ ಕುಟುಂಬಸ್ಥರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ. ಗಂಡ ಹರೀಶ್(31) ಮತ್ತು ಈತನ ತಂದೆ ರಾಮಕೃಷ್ಣ(61) ವಿರುದ್ಧ ಎಫ್​ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net