

ಹುಬ್ಬಳ್ಳಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಬಂಜೆತನ ಕಂಡುಬರುತ್ತಿದೆ. ಇದು ಬರೀ ಮಹಿಳೆಯರಲ್ಲಷ್ಟೇ ಅಲ್ಲ, ಪುರುಷರಿಗೂ ಅನ್ವಯವಾಗುತ್ತದೆ. ವೈದ್ಯರ ಸಲಹೆ ಮೇರೆಗೆ ಇಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಿದರೆ ಬಂಜೆತನ ನಿವಾರಣೆ ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ರಾಜ್ಯ ಮಹಿಳಾ ಶಾಖೆ ಅಧ್ಯಕ್ಷೆ ಡಾ. ಸೌಮ್ಯರಾಣಿ ಬಿ.ಕೆ. ತಿಳಿಸಿದರು.
ಧಾರವಾಡದ ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಧಾರವಾಡ ಮಹಿಳಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಬಂಜೆತನ ಕುರಿತ ಸಿಎಂಇ (ಕಂಟಿನ್ಯೂಅಸ್ ಮೆಡಿಕಲ್ ಎಜುಕೇಷನ್)ನಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪತಿ-ಪತ್ನಿ ಇಬ್ಬರನ್ನೂ ಪರೀಕ್ಷೆ ಮಾಡಿದಾಗ ಇರುವ ಸಮಸ್ಯೆ ಪತ್ತೆಗೆ ಅನುಕೂಲ. ಅಲ್ಲದೇ ಬಂಜೆತನ ನಿವಾರಣೆಯಾಗಿ ಸಂತಾನ ಫಲ ಪ್ರಾಪ್ತಿಯಾಗುತ್ತದೆ. ಒಬ್ಬರ ಮೇಲೊಬ್ಬರು ದೂರತ್ತ ಕೂಡುವುದು ಸರಿಯಲ್ಲ ಎಂದು ತಿಳಿವಳಿಕೆ ನೀಡಿದರು.
ಧಾರವಾಡ ವೈದ್ಯೆಯರ ಘಟಕ ಅತ್ಯುತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಹಿಳೆಯರ ಸುರಕ್ಷತೆ, ಆರೋಗ್ಯ ತಪಾಸಣೆ, ಆರ್ಥಿಕ ಬಲ ತುಂಬುವ ಕೆಲಸ ಮಾಡುತ್ತಿದೆ. ಇತರ ವಿಭಾಗದವರಿಗೂ ಇದು ಮಾದರಿಯಾಗಿದೆ ಎಂದು ಬಣ್ಣಿಸಿದರು.
ಡಾ. ಗೀತಾ ಭರತ್ ಉತ್ತೂರ ಮಾತನಾಡಿ, ಒತ್ತಡ ರಹಿತ ಜೀವನ ನಡೆಸಬೇಕು. ಒಳ್ಳೆಯ ದಿನಚರಿಗಳನ್ನು ರೂಢಿಸಿಕೊಳ್ಳಬೇಕು. ಅಂದಾಗ ಸಂತಾನ ಫಲ ಶೀಘ್ರವಾಗಿಯೇ ಲಭಿಸುತ್ತದೆ ಎಂದರು.
ಡಾ. ನಿಷ್ಠಾ ಮಹಾಬಲಶೆಟ್ಟಿ, ಡಾ. ಕೋಮಲ ರೇವಣಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಎನ್.ಗಾಬಿ ಮಾತನಾಡಿ, ಪುರುಷ ಮತ್ತು ಮಹಿಳೆ ಬಂಜೆತನ ಹೆಚ್ಚಳವಾಗುತ್ತಿದೆ. ವೈದ್ಯಕೀಯ ತಪಾಸಣೆಯಿಂದ ಮಾತ್ರ ಬಂಜೆತನ ನಿರ್ಮೂಲನೆ ಸಾಧ್ಯ ಎಂದರು.
ಐಎಂಎ ಮಹಿಳಾ ಶಾಖೆ ಅಧ್ಯಕ್ಷೆ ಡಾ. ಕವಿತಾ ಮಂಕಣಿ ಮಾತನಾಡಿ, ವೈದ್ಯರು ಮತ್ತು ಸಂಘ-ಸಂಸ್ಥೆಯವರ ಸಹಕಾರದಿಂದ ಒಳ್ಳೊಳ್ಳೆ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ನಾವು ಹಾಕಿಕೊಂಡ ರೂಪುರೇಷೆಗಳು ಜನರ ಮನ ತಲುಪುವಂತೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಡಾ. ಜ್ಯೋತಿ ಪ್ರಕಾಶ ಸುಲ್ತಾನಪುರಿ, ಡಾ. ಲೀನಾ ಕಾಮತ್, ಡಾ. ಪ್ರಮೋದ ಛಬ್ಬಿ, ಡಾ. ರೇವಣಸಿದ್ದಪ್ಪ ಕಣಗಲಿ, ಡಾ. ಲೋಹಿತ ಕುಂಬಾರ, ಡಾ. ಸುನೀಲ ಕುಮಾರ ಅವರು ಸಂವಾದ ನಡೆಸಿಕೊಟ್ಟರು.
ಐಎಂಎ ಧಾರವಾಡ ಅಧ್ಯಕ್ಷ ಡಾ. ಸತೀಶ ಇರಕಲ್, ಕಾರ್ಯದರ್ಶಿ ಡಾ. ಕಿರಣಕುಮಾರ, ಮಹಿಳಾ ಶಾಖೆ ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ ಇತರರು ಉಪಸ್ಥಿತರಿದ್ದರು.