

ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದೆಂಬ ಆಸೆಯಿಂದ ವೈದ್ಯ ಸೇರಿ ಮೂವರು ಬರೋಬ್ಬರಿ ಎರಡು ಕೋಟಿ ರೂ. ಕಳೆದುಕೊಂಡಿದ್ದಾರೆ.
ಭದ್ರಾವತಿ ತಾಲೂಕಿನ 39 ವರ್ಷದ ವೈದ್ಯ, 39 ಹಾಗೂ 45 ವರ್ಷದ ಆತನ ಸ್ನೇಹಿತ(ರೈತರು)ರು ವಂಚನೆಗೆ ಒಳಗಾದವರು. 2024ರ ನ.11ರಿಂದ 2025ರ ಮಾ.20ರವೆರೆಗೆ 2.19 ಕೋಟಿ ರೂ. ಹೂಡಿಕೆ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
2024ರ ಅ.31ರಂದು ಫೇಸ್‌ಬುಕ್‌ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ವೈದ್ಯರಿಗೆ ಕ್ವಾಂಟಮ್ ಕ್ಯಾಪಿಟಲ್ ಗ್ರೂಪ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಾಂಶ ಗಳಿಸುವ ಆಮಿಷವೊಡ್ಡಲಾಗಿತ್ತು. ಅದರಂತೆ ಆನ್‌ಲೈನ್‌ನಲ್ಲಿ ಬಂದ ಅರ್ಜಿ ಭರ್ತಿ ಮಾಡಿದ್ದರು. ಕೂಡಲೇ ಅವರನ್ನು ವರುಣ್ ಜೋಶಿ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ವೊಂದಕ್ಕೆ ಸೇರಿಸಿಕೊಂಡು ಹೂಡಿಕೆ ಕುರಿತು ಮಾಹಿತಿ ನೀಡಲಾಗಿತ್ತು.
ಆರಂಭದಲ್ಲಿ 5 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದ ವೈದ್ಯರಿಗೆ 65 ಸಾವಿರ ರೂ. ಲಾಭಾಂಶ ನೀಡಿದ್ದರು. ಆನಂತರ 1.5 ಕೋಟಿ ರೂ. ಹೂಡಿಕೆ ಮಾಡಿದರೆ 25 ಕೋಟಿ ರೂ. ಲಾಭ ಗಳಿಸಬಹುದೆಂದು ನಂಬಿಸಿದ್ದರು. ಇಷ್ಟು ಹಣವಿರದ ಹಿನ್ನೆಲೆ ವೈದ್ಯರು ತಮ್ಮ ಇಬ್ಬರು ಸ್ನೇಹಿತರಿಂದ 71 ಲಕ್ಷ ರೂ. ಹೂಡಿಕೆ ಮಾಡಿಸಿದ್ದರು. ಲಾಭದಲ್ಲಿ ಮೂವರು ಹಂಚಿಕೊಳ್ಳುವ ಕುರಿತು ಮಾತನಾಡಿಕೊಂಡಿದ್ದರು. 1.50 ಕೋಟಿ ರೂ. ಹೂಡಿಕೆ ಮತ್ತು ತೆರಿಗೆ ಹಣ ಪಾವತಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೂಡಿಕೆ ಮತ್ತು ಲಾಭಾಂಶದ ಕುರಿತು ವಿಚಾರಿಸಲು ಕರೆ ಮಾಡಿದಾಗ ವಂಚನೆಗೊಳಗಾಗಿದ್ದು ಅರಿವಿಗೆ ಬಂದಿದೆ. ಈ ಹಿನ್ನೆಲೆ 2.19 ಕೋಟಿ ರೂ. ವಂಚನೆಯಾಗಿದೆ ಎಂದು ಆರೋಪಿಸಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.