ವೈದ್ಯರಿಗೆ ಸೇವಾ ಮನೋಭಾವ, ತಾಳ್ಮೆ ಅಗತ್ಯ

SHIRAHATTI
Published on

ಶಿರಹಟ್ಟಿ: ವೈದ್ಯ ವೃತ್ತಿಯ ಪಾವಿತ್ರ್ಯೆ ಕಾಪಾಡಲು ವೈದ್ಯರಾದವರು ಸೇವಾ ಮನೋಭಾವದೊಂದಿಗೆ ತಾಳ್ಮೆ, ಜ್ಞಾನ, ಶ್ರದ್ಧೆ ಮತ್ತು ಸಮಯ ಪ್ರಜ್ಞೆ ಬೆಳೆಸಿಕೊಂಡು ಮಾನವೀಯ ಗುಣ ಹೊಂದಿದಾಗ ಮಾತ್ರ ಜನರ ವಿಶ್ವಾಸಾರ್ಹತೆಗೆ ಪಾತ್ರರಾಗಲು ಸಾಧ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಭಿಪ್ರಾಯಪಟ್ಟರು.

ಸ್ಥಳೀಯ ಸಿ.ಸಿ.ಎನ್. ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಶಿರಹಟ್ಟಿ, ಲಕ್ಷೇಶ್ವರ ವೈದ್ಯರ ಸಂಘದಿಂದ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜನರ ನಾಡಿಮಿಡಿತ ಅರಿತು ಅವರ ಆರೋಗ್ಯ ರಕ್ಷಣೆಯೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಸಾಮಾನ್ಯ ಜನರಿಗೂ ಸುಲಭ ಹಾಗೂ ಉತ್ಕೃಷ್ಟ ಆರೋಗ್ಯ ಸೇವೆ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಹಿರಿಯ ವೈದ್ಯ ಡಾ.ಎಸ್.ಕೆ. ಅವರಡ್ಡಿ, ಡಾ. ರಾಜಶೇಖರ ಬಶೆಟ್ಟಿ ಮಾತನಾಡಿ, ನೂರೆಂಟು ಒತ್ತಡ, ತಾಪತ್ರಯಗಳ ಮಧ್ಯೆ ನಮ್ಮ ಕೈಲಾದ ಮಟ್ಟಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ರೋಗಿಯ ಮುಖದಲ್ಲಿ ನಗುವಿನ ಅಲೆ ಕಾಣುವ ವೈದ್ಯರ ಬಗ್ಗೆ ಅನ್ಯಥಾ ದೋಷಾರೋಪಣೆ ಮಾಡದೇ ಪ್ರೀತಿ, ಗೌರವದಿಂದ ಕಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಇದೇ ವೇಳೆ ವೈದ್ಯರ ಸಂಘದಿಂದ ಹಿರಿಯ ವೈದ್ಯ ಡಾ. ಎಸ್.ಕೆ. ಅವರಡ್ಡಿ, ಡಾ.ಎಸ್.ಕೆ. ಹೆಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು. ಡಾ.ಮಲ್ಲಾಡದ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಜೆ. ಹೂವಿನ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಎಂ.ಎಸ್. ಉಪ್ಪಿನ, ಟಿಎಚ್​ಒ ಡಾ. ಸುಭಾಸ ದೈಗೊಂಡ, ಉದ್ಯಮಿ ಚಂದ್ರಕಾಂತ ನೂರಶೆಟ್ಟರ, ಡಾ.ಪಿ.ಡಿ. ತೋಟದ, ಶಿರಹಟ್ಟಿ ವೈದ್ಯರ ಸಂಘದ ಅಧ್ಯಕ್ಷ ಡಾ. ಸುನೀಲ ಬುರಬುರೆ, ಡಾ. ಶರಣಪ್ಪ ಬಿಂಕದಕಟ್ಟಿ, ಡಾ.ಶರಣು ಮಠದ, ಡಾ. ಟಿ.ಎಂ. ಮಹೇಂದ್ರಕರ, ಡಾ.ಅಬ್ದುಲ್ ಡಾಲಾಯತ, ಡಾ. ಗೋನಾಳ ಇತರರಿದ್ದರು. ಡಾ. ಪ್ರವೀಣ ಮುಳ್ಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿ.ಎಫ್. ಪಾಟೀಲ, ಡಾ. ಪವನ ಮಹೇಂದ್ರಕರ ಕಾರ್ಯಕ್ರಮ ನಿರ್ವಹಿಸಿದರು.

ತಾಲೂಕು ಸಂಘಕ್ಕೆ ಡಾ. ಬುರಬುರೆ ಅಧ್ಯಕ್ಷ

ಶಿರಹಟ್ಟಿ ತಾಲೂಕು ವೈದ್ಯರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಾ. ಸುನೀಲ ಬುರಬುರೆ, ಡಾ. ಪವನ ಮಹೇಂದ್ರಕರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net