

ಬೆಂಗಳೂರು: ನಿರಂತರ ಆದಾಯ ಹೆಚ್ಚಳ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಅಧಿಕಾರಿಗಳು ಗುರುವಾರ ದೆಹಲಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಪಾರ್ಟಿನೇ ಬಿಡೋಲ್ಲ. ಇನ್ನು ನಮ್ಮನ್ನು ಬಿಡ್ತಾರಾ? ಅಹಮದ್ ಪಟೇಲ್ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ. ಪೋಲಿಟಿಕಲಿ ಎಲ್ಲ ಅಸ್ತ್ರ ಉಪಯೋಗಿಸ್ತಿದ್ದಾರೆ. ನಾನೇನು ತಪ್ಪು ಮಾಡಿಲ್ಲ ಅಂತ ಇಡೀ ದೇಶಕ್ಕೆ ಗೊತ್ತಿದೆ ಎಂದರು.
ಚಾರ್ಜ್ಶೀಟ್ ಫೈಲ್ ಮಾಡಿರೋದು ಮಾಧ್ಯಮಗಳ ಸುದ್ದಿ ನೋಡಿ ನನಗೆ ಗೊತ್ತಾಯ್ತು. ನಮಗೆ ಇನ್ನೂ ಕಾಪಿ ಸಿಕ್ಕಿಲ್ಲ. ಸಾಮನ್ಯವಾಗಿ 6 ತಿಂಗಳಲ್ಲಿ ಚಾರ್ಜ್ಶೀಟ್ ಫೈಲ್ ಮಾಡ್ತಾರೆ. ಬಹಳ ದೊಡ್ಡ ತನಿಖೆ ಮಾಡಿದ್ದಾರೆ. ಅವರು ಹೊಸದಾಗಿ ಸೃಷ್ಠಿ ಮಾಡಲು ಸಾಧ್ಯವಿಲ್ಲ. ಕಾಪಿ ಬರಲಿ ಕಾನೂನಿದೆ ದೇಶದಲ್ಲಿ. ಸತ್ಯ-ಧರ್ಮ ಇದೆ. ಅವರು ನಮಗೆ ಫರ್ದರ್ ನೋಟಿಸ್ ಕೊಡ್ತಾರೆ. ಆಗ ಖಂಡಿತ ಪರಿಶೀಲಿಸ್ತೀವಿ. ನಾವು ಕಾನೂನು ಪರಿಪಾಲನೆ ಮಾಡುವವರು. ರಾಜಕೀಯವಾಗಿ ಎದುರಿಸುವವರಿಗೆಲ್ಲ ಬಿಜೆಪಿ ಹೀಗೆ ಮಾಡ್ತಾ ಇದೆ. ಅವರಿಗೆ ನಾವು ಶರಣಾಗಬೇಕು, ಇಲ್ಲ ಅವರ ಜೊತೆ ಸೇರಿಕೊಳ್ಳಬೇಕು ಅಂತ. ಐ ವಿಶ್ ದೆಮ್ ಆಲ್ ದಿ ಬೆಸ್ಟ್... ಎಂದು ಡಿಕೆಶಿ ಕಿಡಿಕಾರಿದರು.