'ಹುಚ್ಚ ವೆಂಕಟ್'​ ಹೆಸರಲ್ಲಿ ಡಿಕೆಶಿ ಒಡೆತನದ ಶಾಲೆಗೆ ಬಾಂಬ್​ ಬೆದರಿಕೆ! ಪಾಲಕರಿಗೆ ಧೈರ್ಯ ತುಂಬಿದ ಅಪ್ಪ-ಮಗಳು

dks
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಒಡೆತನದ 'ನ್ಯಾಶನಲ್ ಹಿಲ್​ ವ್ಯೂ ಪಬ್ಲಿಕ್ ಸ್ಕೂಲ್'ಗೆ ಬಾಂಬ್​ ಇಡೋದಾಗಿ ಹುಚ್ಚ ಸ್ವಾಮಿ ವೆಂಕಟ್​ ಹೆಸರಿನಲ್ಲಿ ಬೆದರಿಕೆ ಮೇಲ್​ ಬಂದಿದೆ. ಸುಮಾರು 4000 ಸಾವಿರ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ಪಾಲಕರು ಭಯದಿಂದ ಶಾಲೆ ಮುಂದೆ ಜಮಾಯಿಸಿದ್ದಾರೆ. ಶಾಲೆಗೆ ಸೋಮವಾರ ರಜೆ ಘೋಷಿಸಲಾಗಿದೆ.

ಆರ್​ಆರ್ ನಗರದ ನ್ಯಾಷನಲ್ ಹಿಲ್​ ವ್ಯೂ ಪಬ್ಲಿಕ್ ಸ್ಕೂಲ್​ನ 3ನೇ ಯೂನಿಟ್​ಗೆ ಬಾಂಬ್​ ಇಡುವುದಾಗಿ ಭಾನುವಾರ ಸಂಜೆ ಬೆದರಿಕೆ ಮೇಲ್​ ಬಂದಿದೆ. ಸೋಮವಾರ ಬೆಳಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಮೇಲ್​ ನೋಡಿ ಗಾಬರಿಯಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆರ್​ಆರ್​ ನಗರ ಠಾಣೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್​ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಾ ಕೂಡ ಸ್ಥಳದಲ್ಲೇ ಇದ್ದರು. ಹುಚ್ಚ ವೆಂಕಟ್ ಎಂಬಾತನಿಂದ ಈ ಮೇಲ್ ಬಂದಿದೆ. ಪಾಲಕರು ಗಾಬರಿ ಆಗುವುದು ಬೇಡ. ಶಾಲಾ ಮಕ್ಕಳಿಗೆ ಹೈ ಸೆಕ್ಯುರಿಟಿ ನೀಡಲಾಗಿದೆ. ಪ್ರತಿ ಮೂಮೆಂಟ್ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗ್ತಿದೆ. ನಿನ್ನೆ ಒಂದು ಎಕ್ಸಾಂ ಇತ್ತು. ಹಾಗಾಗಿ ಬೇರೆಯವರಿಗೆ ಬರಲು ಅವಕಾಶ ನೀಡಲಾಗಿತ್ತು ಎಂದು ಡಿಕೆಶಿ ಶಿವಕುಮಾರ್ ತಿಳಿಸಿದ್ದಾರೆ.

'ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ(ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲೆ ಆವರಣದ 200 ಮೀಟರ್ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್​, ಬಾಂಬ್ ಟೆರರಿಸ್ಟ್' ಎಂದು ಮೇಲ್​ ಬರೆಯಲಾಗಿದೆ.

ಇನ್ನು ಸ್ಕೂಲ್​ಗೆ ಬಾಂಬ್​ ಬೆದರಿಕೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದಂತೆ ಆತಂಕದಲ್ಲೇ ನೂರಾರು ಪೋಷಕರು ಶಾಲೆ ಮುಂದೆ ಜಮಾಯಿಸಿದ್ದರು. ಪೋಷಕರಿಗೆ ಧೈರ್ಯ ತುಂಬಿದ ಡಿಕೆಶಿ ಪುತ್ರಿ ಐಶ್ವರ್ಯಾ, ಮಕ್ಕಳೆಲ್ಲರೂ ಸೇಫ್ ಆಗಿದ್ದಾರೆ ಭಯ ಪಡಬೇಡಿ. ಒಂದು ಅರ್ಧ ಗಂಟೆ ಟೈಮ್ ಕೊಡಿ ಎಲ್ಲವೂ ಸರಿ ಹೋಗುತ್ತೆ. ನೀವು ಈ ರೀತಿ ಭಯ ಪಡ್ತಿದ್ರೆ ಮ್ಯಾನೇಜ್ಮೆಂಟ್​ಗೆ ಕಷ್ಟ ಆಗ್ತಿದೆ ಎಂದು ಮನವಿ ಮಾಡಿದರು. ಇನ್ನು 1 ರಿಂದ 5ನೇ ತರಗತಿ ವರೆಗಿನ ಮಕ್ಕಳನ್ನು ಈಗಾಗಲೇ ಪಾಲಕರ ಜತೆ ಮನೆಗೆ ಕಳುಹಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ, ಇಂದು ಬೆಳಗ್ಗೆ ಇ-ಮೇಲ್ ಬಂದ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಮಕ್ಕಳನ್ನು ಸೇಫ್ ಯೂನಿಟ್​ಗಳಿಗೆ ಶಿಫ್ಟ್ ಮಾಡಲಾಗಿದೆ. ಶಾಲೆಯನ್ನು ಪರಿಶೀಲನೆ ನಡೆಸಲಾಗಿದೆ. ಬಹುತೇಕ ಮುಕ್ತಾಯವಾಗಿದ್ದು, ಪಾರ್ಕಿಂಗ್​ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಯಾವುದೇ ಶಂಕಿತ ವಸ್ತು ಪತ್ತೆಯಾಗಿಲ್ಲ. ಈ ಬಗ್ಗೆ ಕೇಸ್ ದಾಖಲು ಮಾಡಿಕೊಳ್ಳಲಾಗುತ್ತೆ. ಯಾರು ಮಾಡಿದ್ದಾರೆ? ಕಾರಣ ಏನು? ಎಂಬ ಬಗ್ಗೆ ತನಿಖೆ ಮಾಡಲಾಗುತ್ತೆ. ಸದ್ಯದ ಮಾಹಿತಿ ಪ್ರಕಾರ ಇದೊಂದು ಶಾಲೆಗೆ ಮಾತ್ರ ಬೆದರಿಕೆ ಮೇಲ್ ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net