

ಕೋಟ: ಇಲ್ಲಿನ ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರ್ಳೆಬೆಟ್ಟು ಪರಿಸರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ, ಸಾಸ್ತಾನದ ರಾಷ್ಟ್ರೀಯ ಹೆದ್ದಾರಿಯಿಂದ ನೀರು ಹರಿವಿಗೆ ಸಂಪರ್ಕ ಕಲ್ಪಿಸಿರುವ ತೋಡು ಒಡೆದು ಅಪಾರ ಕೃಷಿ ಭೂಮಿ ಹಾಗೂ ಅನೇಕ ಮನೆಗಳು ಜಲಾವೃತಗೊಂಡಿವೆ. ನೀರಿನ ರಭಸಕ್ಕೆ ಕೃಷಿ ಭೂಮಿಗಳಲ್ಲಿ ಭಾರಿ ಪ್ರಮಾಣದಲ್ಲಿ ಕಂದಕ ಸೃಷ್ಟಿಯಾಗಿದೆ.
ಹೆದ್ದಾರಿ ನೀರು ಹರಿಯಲು ನಿರ್ಮಿಸಿರುವ ತೋಡು ಒಡೆದ ಪರಿಣಾಮ ಐರೋಡಿ ಗ್ರಾಮವೇ ಜಲಾವೃತವಾಗುವ ಭೀತಿ ಎದುರಾಗಿದೆ. ಗುರುವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತೋಡಿನ ಸಮೀಪದ ನಾಲ್ಕಾರು ಮನೆಗಳು ಕುಸಿಯುವ ಭೀತಿ ಉಂಟಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಈ ತೋಡುಗಳನ್ನು ಕಾಂಕ್ರೀಟ್ ಕಾಮಗಾರಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಳೆ ಹಾನಿಗೀಡಾದ ಸ್ಥಳಗಳಿಗೆ ಐರೋಡಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಜಿಘೆಜ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸೇರಿ ತುರ್ತು ಕಾಮಗಾರಿ ಕೈಗೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಕು, ಅಭಿವೃದ್ಧಿ ಅಧಿಕಾರಿ ಪ್ರಶಾಂತ್, ಪಂಚಾಯಿತಿ ಪ್ರತಿನಿಧಿ ಶಿವರಾಮ ಶ್ರೀಯಾನ್, ಸರೋಜ ರಮ್ಯ, ಸ್ಥಳೀಯರಾದ ಸುರೇಶ್ ಕುಂದರ್, ಸಂಜೀವ ಪೂಜಾರಿ, ನರಸಿಂಹ ಪೂಜಾರಿ, ಗೋಪಾಲ್ ಪೂಜಾರಿ, ಉದಯ ಪೂಜಾರಿ ಇನ್ನಿತರರು ದುರಸ್ತಿ ಕಾರ್ಯದಲ್ಲಿ ಕೈಜೋಡಿಸಿದರು.