

ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿರುವ 16 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಪಿ.ಮುರಳೀಧರ ಪೈ ಸೆ.20ರಂದು ಅಧಿಸೂಚನೆ ಹೊರಡಿಸಿದ್ದು, ರಾಜ್ಯದಲ್ಲಿ ಖಾಲಿಯಿರುವ 14 ಬ್ಯಾಕ್ಲಾಗ್ ಮತ್ತು 2 ಖಾಲಿ ಹುದ್ದೆ ಸೇರಿ ಒಟ್ಟು 16 ಜಿಲ್ಲಾ ನ್ಯಾಯಾಧೀಶರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅ.19 ಅಂತಿಮ ದಿನ. ಪರೀಕ್ಷಾ ಶುಲ್ಕ ಪಾವತಿಗೆ ಅ.21 ಕೊನೆಯ ದಿನ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಾನೂನು ಪ್ರಕಾರ ಸ್ಥಾಪನೆಯಾಗಿರುವ ಯಾವುದೇ ಕಾಲೇಜಿನಿಂದ ಕಾನೂನು ಪದವಿ ಪಡೆದಿರಬೇಕು. ಹೈಕೋರ್ಟ್ ಸೇರಿ ಯಾವುದೇ ನ್ಯಾಯಾಲಯದಲ್ಲಿ ಕನಿಷ್ಠ 7 ವರ್ಷ ವಕೀಲಿ ವೃತ್ತಿ ಮಾಡಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 45 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಅಭ್ಯರ್ಥಿಗಳಿಗೆ 48 ವರ್ಷಗಳ ವಯೋಮಿತಿ ನಿಗದಿಪಡಿಲಾಗಿದೆ. ಹೆಚ್ಚಿನ ಮಾಹಿತಿಗೆ ಹೈಕೋರ್ಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.