

ನಾಗಮಂಗಲ: ಪಟ್ಟಣದಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಕಳೆದ 35 ವರ್ಷಗಳಿಂದ ನಿರಂತರವಾಗಿ ತಮ್ಮ ಮನೆಯಲ್ಲಿ ನವರಾತ್ರಿ ಹಾಗೂ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಗೊಂಬೆಗಳನ್ನು ಪ್ರದರ್ಶನಕ್ಕಿಡುವ ಮೂಲಕ ದಸರಾ ಸಂಭ್ರಮವನ್ನು ಹೆಚ್ಚಿಸುವ ಜತೆಗೆ ಸಂಸ್ಕೃತಿಯ ಜೀವಂತಿಕೆಗೆ ಶ್ರಮಿಸುತ್ತಿದ್ದಾರೆ.
ಶಿಕ್ಷಕ ನರಸಿಂಹಪ್ರಸಾದ್ ಪಟ್ಟಣದ ಟಿಬಿ ಬಡಾವಣೆಯ ತಮ್ಮ ನಿವಾಸದಲ್ಲಿ ಪಟ್ಟದ ಗೊಂಬೆಗಳನ್ನು ಕೂರಿಸಿದ್ದು, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಗೊಂಬೆಗಳನ್ನು ವೀಕ್ಷಿಸುತ್ತಿದ್ದಾರೆ. ಈ ಮೂಲಕ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ನವರಾತ್ರಿಯ ಮೊದಲ ದಿನ ಆರಂಭವಾದ ಗೊಂಬೆಗಳ ಪ್ರದರ್ಶನ ನವೆಂಬರ್ 1 ರವರೆಗೆ ಇರಲಿದೆ.
ಪ್ರತಿವರ್ಷವೂ ಹಳೆಯ ಗೊಂಬೆಗಳೊಟ್ಟಿಗೆ ಹೊಸ ಹೊಸ ವಿಧದ ಗೊಂಬೆಗಳನ್ನು ಸೇರ್ಪಡೆಗೊಳಿಸುತ್ತಿದ್ದಾರೆ. ಇವರ ಮನೆಯಲ್ಲಿ 2 ಗೊಂಬೆಗಳಿಂದ ಆರಂಭವಾದ ಈ ಸಂಪ್ರದಾಯ ಪ್ರಸ್ತುತ ಸುಮಾರು 2.5 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಿಭಿನ್ನ ರೀತಿಯಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗುತ್ತಿದ್ದು, ಪ್ರತಿವರ್ಷವೂ ಒಂದೊಂದು ವಿಶೇಷ ಸಂದೇಶವನ್ನು ಸಾರುವಂತಹ ಮಾದರಿಯಲ್ಲಿ ಗೊಂಬೆಗಳ ಪ್ರದರ್ಶನ ನಡೆಯಲಿದೆ.
ಮೈಸೂರು ದಸರಾ ಆಚರಣೆ ಕೇವಲ ಆಡಂಬರವಾಗಿದ್ದು, ಸಂಪ್ರದಾಯವೆಂಬುದು ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ನಮ್ಮೂರಿನಲ್ಲಿಯೇ ದಸರಾ ಆಚರಣೆ ಪರಂಪರೆಯನ್ನು ಬಿಂಬಿಸುವ ಕೆಲಸವನ್ನು ಶಿಕ್ಷಕ ನರಸಿಂಹಪ್ರಸಾದ್ ಮಾಡುತ್ತಿರುವುದು ಶ್ಲಾಘನೀಯ.