

ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಗ್ರಾಮಸಭೆ ಅಧ್ಯಕ್ಷ ಮಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ಗ್ರಾಪಂ ಕಚೇರಿ ಆವರಣದಲ್ಲಿ ಸೋಮವಾರ ನಡೆಯಿತು.
ಗ್ರಾಮಸಭೆ ಪ್ರಾರಂಭದಲ್ಲಿ ಸಭೆಗೆ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಇಲ್ಲದಿರುವುದರಿಂದ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಉತ್ತರಿಸಬೇಕಿದ್ದ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಸಭೆಯ ನೋಡಲ್ ಅಧಿಕಾರಿಯೂ ಆದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಾದವ್ ಬಾಬು ಮಧ್ಯಪ್ರವೇಶಿಸಿ ಮಾತನಾಡಿ, ಅಧಿಕಾರಿಗಳ ಗೈರು ಹಾಜರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವರದಿಯನ್ನು ಆರೋಗ್ಯ ಇಲಾಖೆ ಮೇಲಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಮತ್ತು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಆರೋಗ್ಯ ಸಚಿವರು ಮತ್ತು ಸಂಬಂಧಪಟ್ಟ ಶಾಸಕರ ಗಮನಕ್ಕೆ ತರಲಾಗುವುದೆಂದು ಅಧ್ಯಕ್ಷ ಮಹಮ್ಮದ್ ಹನೀಫ್ ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳ ಮಾಹಿತಿ ಮತ್ತು ಅದಕ್ಕೆ ಸಂಬಂಧಪಟ್ಟ ಚರ್ಚೆ ನಡೆಯುವ ವೇಳೆ ಗ್ರಾಪಂ ಸದಸ್ಯ ಡಿ.ಆರ್.ವೇದಕುಮಾರ್ ಮಾತನಾಡಿ, ಪಹಣಿಯ ಬೆಳೆ ಕಾಲಂನಲ್ಲಿ ಬೆಳೆ ಎಂಬ ಪದ ನಮೂದಾಗದೆ ರೈತರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಅಧಿಕಾರಿ ಗಮನ ಸೆಳೆದರು.
ಈ ಭಾಗದಲ್ಲಿ ರೈತರು ದೀರ್ಘಾವಧಿಯ ಬೆಳೆ ಬೆಳೆಯುವುದರಿಂದ ವಾರ್ಷಿಕವಾಗಿ ಬೆಳೆ ಸಮೀಕ್ಷೆಯ ಅವಶ್ಯಕತೆ ಇಲ್ಲ. ಬೆಳೆ ಸಮೀಕ್ಷೆ ್ನ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಗ್ರಾಪಂನಿಂದ ಪತ್ರ ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ ಆಗುತ್ತಿರುವ ಸಮಸ್ಯೆ, ಕೆಲವು ವಾರ್ಡ್‌ಗಳಲ್ಲಿ ಹಗಲು ವೇಳೆ ವಿದ್ಯುತ್ ದೀಪ ಉರಿಯುತ್ತಿರುವ ಬಗ್ಗೆ ಚರ್ಚಿಸಲಾಯಿತು.
ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ ಚೈತ್ರಾ, ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಮ್ಮ, ಸೆಸ್ಕ್ ಜೆಇ ಪ್ರಕಾಶ್, ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಈಶ್ವರ್ ಕಲ್ಯಾಣಿ, ಪಶು ವೈದ್ಯಾಧಿಕಾರಿ ಡಾ.ಸತೀಶ್ ಮುಂತಾದ ಇಲಾಖೆಯ ಅಧಿಕಾರಿಗಳು ಇಲಾಖೆಯಿಂದ ಜನರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸುವಂತೆ ಮತ್ತು ನೀರಿನ ಕಂದಾಯವನ್ನು ಸಕಾಲದಲ್ಲಿ ಪಾವತಿಸುವಂತೆ ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಫ್ ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ದಾಕ್ಷಾಯಿಣಿ ಕಾಂತರಾಜ್, ಸದಸ್ಯರಾದ ದಿನೇಶ್‌ಕುಮಾರ್, ಮೋಕ್ಷಿತ್ ರಾಜ್, ಪಾವನಾ, ಲೀನಾ, ರೇಣುಕಾ, ವಿನೋದ್, ಪಿಡಿಒ ಗಿರೀಶ್, ನರೇಗಾ ಯೋಜನೆ ಅಭಿಯಂತರ ರಾಜೇಶ್ ಇದ್ದರು.