

ಮೈಸೂರು: ಯೋಗವನ್ನು ನಿಯಮಬದ್ಧವಾಗಿ ಪಾಲನೆ ಮಾಡುವುದರಿಂದ ಶಿಸ್ತುಬದ್ಧ ಜೀವನ ನಡೆಸಬಹುದು. ಜತೆಗೆ, ಆರೋಗ್ಯ ವೃದ್ಧಿ ಮಾಡಿಕೊಂಡು ಸಮಾಜ ಹಾಗೂ ಕುಟುಂಬವನ್ನು ಲವಲವಿಕೆಯಿಂದ ನೋಡಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಮಾಡುವುದರಿಂದ ದೇಹದ ನಿಯಂತ್ರಣ, ಅಂಗಾಂಗಗಳ ಪರಿಪೂರ್ಣ ಮತ್ತು ಕ್ರಮಬದ್ಧವಾದ ಕಾರ್ಯಚಟುವಟಿಕೆ ಸಾಧ್ಯ. ಜತೆಗೆ, ಮನಸ್ಸಿನ ಸಮತೋಲನವನ್ನೂ ಸಾಧಿಸಬಹುದು. ಶಿಸ್ತುಬದ್ಧ ಬದುಕು ನಡೆಸಲು ಯೋಗ ಅತ್ಯಂತ ಪ್ರೇರಣೆಯಾಗಿದೆ ಎಂದರು.
ನಿರ್ದಿಷ್ಟವಾದ ದೇಹದ ಸಮಸ್ಯೆಗಳಿಗೆ ನಿರ್ದಿಷ್ಟವಾದ ಯೋಗ ಕ್ರಿಯೆಗಳನ್ನು ಮಾಡಿದರೆ ಆರೋಗ್ಯಯುತವಾಗಿರಲು ಸಾಧ್ಯ ಎಂಬುದನ್ನು ವೈದ್ಯಕೀಯ ಶಾಸ್ತ್ರ ಹೇಳುತ್ತದೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಹಿಂದಿನ ಪರಂಪರೆಯ ರಾಯಭಾರಿಯಾಗಿ ಇಂದು ಯೋಗ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಈ ಸಲ ದೊಡ್ಡ ಪ್ರಮಾಣದಲ್ಲಿ ಯೋಗ ದಸರಾ ಮಾಡಲು ಸಿದ್ಧವಾಗಬೇಕು ಎಂದರು.
ಭಾರತದಲ್ಲಿ ಆಧುನಿಕ ಕಾಲದ ಯೋಗ ಮೈಸೂರಿನಿಂದ ಸೃಷ್ಟಿಯಾಗಿದೆ ಎಂದರೆ ತಪ್ಪಿಲ್ಲ. ಸಾಂಸ್ಕೃತಿಕ ನಗರಿ ಮೈಸೂರು ಯೋಗ ನಗರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದೆ. ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಇದೆ ಎಂದು ಹೇಳಿದರು.
ಆಧುನಿಕ ಯೋಗ ಪಿತಾಮಹ ತಿರುಮಲೈ ಕೃಷ್ಣಮಾಚಾರ್ಯ ಅವರನ್ನು ನಾಲ್ವಡಿ ಅವರು ಮೈಸೂರಿಗೆ ಕರೆತಂದರು. ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಕೃಷ್ಣಾಮಾಚಾರ್ಯರಿಂದ ಯೋಗ ಪಾಠ ಕಲಿತ ಇಂದ್ರದೇವಿ, ಬಿ.ಕೆ.ಎಸ್.ಅಯ್ಯಂಗಾರ್, ಕೆ.ಪಟ್ಟಾಭಿ ಜೋಯಿಸ್ ಅವರು, ಯೋಗವನ್ನು ವಿಶ್ವವ್ಯಾಪಿಯಾಗಿಸಿದರು ಎಂದು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್, ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ, ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ ಪಾಲ್ಗೊಂಡಿದ್ದರು.