

ಯಲ್ಲಾಪುರ: ಚುನಾವಣೆಯ ಸಮಯದಲ್ಲಿ ರಸ್ತೆಗೆ ಮಣ್ಣುಹಾಕಿ ಮತದಾರರ ಓಲೈಸಲು ಮಾಡಿದ ಕೆಲಸದಿಂದಾಗಿ ಈಗ ಮಳೆಗಾಲದಲ್ಲಿ ನಿತ್ಯ ಓಡಾಡಲು ತಾಲೂಕಿನ ಆನಗೋಡ ಗ್ರಾ.ಪಂ. ವ್ಯಾಪ್ತಿಯ ತಟಗಾರ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ತಟಗಾರಕ್ಕೆ ಹೋಗುವ ರಸ್ತೆ ಅಕ್ಷರಶಃ ಕೆಸರು ಗದ್ದೆಯಾಗಿದ್ದು, ರಸ್ತೆಯಲ್ಲಿ ಓಡಾಡುವುದು ಹೇಗೆಂಬುದು ಗ್ರಾಮಸ್ಥರ ಚಿಂತೆಯಾಗಿದೆ. ರಸ್ತೆ ದುರಸ್ತಿ ಮಾಡದೆ ಹತ್ತು ವರ್ಷಗಳೇ ಕಳೆದಿದ್ದವು. ರಸ್ತೆ ದುರಸ್ತಿ ಮಾಡಿ ಎಂದು ಗ್ರಾಮಸ್ಥರು ಮನವಿ ನೀಡಿ ಬೇಸತ್ತಿದ್ದರು. ಕೊನೆಗೂ ಕಳೆದ ವಿಧಾನಸಭಾ ಚುನಾವಣೆ ಬಂದಾಗ, ಮತದಾರರ ಓಲೈಕೆಗಾಗಿ ತರಾತುರಿಯಲ್ಲಿ ರಸ್ತೆಗೆ ಮಣ್ಣು ಹಾಕಿ ಕೈತೊಳೆದುಕೊಂಡಿದ್ದಾರೆ.
ಈ ರಸ್ತೆಯಲ್ಲಿ ಹಂಗಾರಿಮನೆ, ಜೋಗದಮನೆ, ತುಂಬೊಳ್ಳಿಮನೆ, ಮೂಲೆಮನೆ, ಬದನೆಪಾಲು, ಹೀಗೆ ಮೂವತ್ತಕ್ಕೂ ಹೆಚ್ಚು ಮಜರೆಗಳ ಜನರು ನಿತ್ಯ ಓಡಾಡುತ್ತಾರೆ. ರಸ್ತೆಗೆ ಮಣ್ಣು ಹಾಕಿರುವುದರಿಂದ ಕೆಸರಲ್ಲಿ ಗಾಡಿ ಓಡಿಸಲಾಗದೆ ತೊಂದರೆ ಪಡುತ್ತಿದ್ದಾರೆ. ಕೂಡಲೇ ರಸ್ತೆ ಸರಿಪಡಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಪ್ರಸಾದ ಭಟ್ಟ, ಸುಬ್ರಹ್ಮಣ್ಯ ಹಂಗಾರಿ,ರಾಜು ಹಂಗಾರಿ,ಮಂಜುನಾಥ ಭಟ್ಟ,ಶಿವರಾಮ ಹಂಗಾರಿ ಇತರರು ಆಗ್ರಹಿಸಿದ್ದಾರೆ.