

ಕಡೂರು: 12ನೇ ಶತಮಾನದ ಬಸವಾದಿ ಶರಣರು ಕಾಯಕ ಮತ್ತು ದಾಸೋಹದ ಪಾವಿತ್ರ್ಯತೆಯನ್ನು ಪ್ರಪಂಚಕ್ಕೆ ಪರಿಚಯಿಸಿದರು ಎಂದು ಚಿಂತಕ ಯಗಟಿ ಶಿವಲಿಂಗಸ್ವಾಮಿ ತಿಳಿಸಿದರು.
ಯಳನಡು ಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ ಶರಣರ ಬೆಳದಿಂಗಳು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಕಾಯಕ ಪ್ರತಿಯೊಬ್ಬ ಮನುಷ್ಯನ ಬದುಕಿನ ಆಯಾಮ. ಸತ್ಯಶುದ್ಧ ಕಾಯಕದಿಂದ ಮಾತ್ರ ಜೀವನದ ಸಾರ್ಥಕತೆ ದೊರೆಯುತ್ತದೆ. ಕಾಯಕಕ್ಕೆ ತನ್ನ ದೇಹವನ್ನು ಸಮರ್ಪಿಸಿ ನಿಷ್ಠೆಯಿಂದ ಕಾಯಕ ಮಾಡಿದರೆ ತನು, ಮನ, ಭಾವಶುದ್ಧತೆಯ ಜತೆಗೆ ಆತ್ಮ ಕಲ್ಯಾಣವಾಗುತ್ತದೆ. ಪ್ರಸ್ತುತ ವಾಸ್ತವ ಬದುಕು ಆಸೆ, ಆಮಿಷಗಳಿಗೆ ಒಳಗಾಗಿ ಭ್ರಷ್ಟಾಚಾರ ಮತ್ತು ಅನ್ಯಾಯದ ಮೂಲಕ ಜೀವನ ಸಾಗಿಸಿ ತಮ್ಮ ಅದೋಗತಿಗೆ ಕಾರಣವಾಗುತ್ತಿರುವ ಜನರಿಗೆ ನುಲಿಯ ಚಂದಯ್ಯ ಮತ್ತು ಮಡಿವಾಳ ಮಾಚಿದೇವರು ದಾರಿ ದೀಪವಾಗಿದ್ದಾರೆ ಎಂದು ತಿಳಿಸಿದರು.
ಯಳನಡು ಮಠದ ಶ್ರೀಜ್ಞಾನಪ್ರಭು ಸಿದ್ಧರಾಮದೇಶೀಕೆಂದ್ರ ಸ್ವಾಮೀಜಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತ ಜಡೇ ಮಲ್ಲಪ್ಪ, ಕಾರ್ಯದರ್ಶಿ ಅರೇಹಳ್ಳಿ ಮೋಹನ್, ಉಮಾ ಬಸವರಾಜಪ್ಪ, ಪುಷ್ಪಾ ಸುಬ್ರಹ್ಮಣ್ಯ ಕೆ.ಬಿ.ಸುನಿತಾ ವೀಣಾ ಈಶ್ವರಪ್ಪ, ಜಿ ಭಾನುಮೂರ್ತಿ, ಮೇಲೇಗೌಡ, ಕಾಶಿನಾಥ್ ಮತ್ತಿತರಿದ್ದರು.