ಕಳೆಗಟ್ಟಿದ ನಾಗರ ಪಂಚಮಿ ಸಡಗರ

9 lxr 1.a
Published on

ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ನಾಡಿನ ದೊಡ್ಡ ಹಬ್ಬ ನಾಗರ ಪಂಚಮಿ ಸಮೀಪಿಸಿದೆ. ಮನೆ ಮನಗಳಲ್ಲಿ ಸಡಗರ ಸಂಭ್ರಮ ಇಮ್ಮಡಿಸಿದೆ. ಪಟ್ಟಣದ ಮಾರುಕಟ್ಟೆಯಲ್ಲಿ ಖರೀದಿಯ ಅಬ್ಬರ ಜೋರಾಗಿದೆ.

ಕರೊನಾ ಕಾಟದಿಂದಾಗಿ ಕಳೆದ ವರ್ಷ ಹಬ್ಬದ ಸಡಗರ ಅಷ್ಟಾಗಿ ಇರಲಿಲ್ಲ. ಆದರೆ, ಈ ವರ್ಷ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ಸೋಂಕಿನ ಸೆಳೆತದ ಭಯವಿಲ್ಲದೆ ಜನರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಬಟ್ಟೆ ಅಂಗಡಿಗಳು, ಕಿರಾಣಿ, ಅಲಂಕಾರಿಕ ವಸ್ತುಗಳು, ಹೂ ಹಣ್ಣಿನ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದರೂ ಸಂಪ್ರದಾಯ ಆಚರಣೆಗಾಗಿ ಜನರು ಕಷ್ಟದ ನಡುವೆಯೂ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ. ಈ ವರ್ಷ ಉತ್ತಮ ಮುಂಗಾರಿನಿಂದಾಗಿ ಕೃಷಿ ಕೂಲಿಕಾರರು ಕೈತುಂಬ ಕೆಲಸದಿಂದ ಬಂದ ಹಣದಲ್ಲಿ ಸ್ವಲ್ಪ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆದರೆ, ಕೆಲವು ರೈತರು ತಾವು ನಂಬಿದ ಹೆಸರು ಬೆಳೆ ಕೈಕೊಟ್ಟಿದ್ದರಿಂದ ಮತ್ತೆ ಸಾಲಕ್ಕೆ ಕೈಯೊಡ್ಡುವ ಪರಿಸ್ಥಿತಿಯಿದೆ.

ನಾಗರ ಅಮಾವಾಸ್ಯೆಯಿಂದಲೇ ಶ್ರಾವಣ ಮಾಸದ ಹಬ್ಬಗಳು ಆರಂಭಗೊಂಡಿದೆ. ಇಂದು ರೊಟ್ಟಿ ಪಂಚಮಿ, ಗುರುವಾರ ಹಾಲೆರೆಯುವ ಹಬ್ಬ, ಶುಕ್ರವಾರ ವರಮಹಾಲಕ್ಷ್ಮೀ ಪೂಜೆ, ಶನಿವಾರ ಕೆರೆಕಟ್ಟಂಬಲಿ, ಭಾನುವಾರ ನೂಲು ಹುಣ್ಣಿಮೆ, ಮುಂದಿನ ಬುಧವಾರ ಸಂಕಷ್ಟ ಚತುರ್ಥಿ ಹೀಗೆ ಗಣೇಶ ಚತುರ್ಥಿವರೆಗೆ ಹಬ್ಬಗಳ ಸಂಭ್ರಮ ನಡೆಯಲಿದೆ. ಕರೊನಾ ಭೀತಿಯಿಂದ ಯಾವ ಸಂರ್ಭದಲ್ಲಾದರೂ ಲಾಕ್​ಡೌನ್ ಘೊಷಣೆಯಾಗಬಹುದು ಎನ್ನುವ ಭಯದಿಂದ ಕೆಲವರು ಈಗಲೇ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.

ಬೆಲೆ ಏರಿಕೆ ಬಿಸಿ: ಇಂಧನ, ಆಹಾರ ಪದಾರ್ಥ, ತರಕಾರಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಂಚಮಿ ಹಬ್ಬದ ಅಗತ್ಯ ದಿನಸಿ ವಸ್ತುಗಳಾದ ಕಡಲೆ ಬೇಳೆ ಪ್ರತಿ ಕೆಜಿಗೆ 80 ರೂಪಾಯಿ, ಬೆಲ್ಲ 35-40 ರೂಪಾಯಿ, ಕೊಬ್ಬರಿ 210 ರೂಪಾಯಿ, ಮಡಕಿ 96 ರೂಪಾಯಿ, ಗೋಧಿ ಹಿಟ್ಟು 35-55 ರೂಪಾಯಿ, ಅಡುಗೆ ಎಣ್ಣೆ-150-170 ರೂಪಾಯಿ, ಸಕ್ಕರೆ-36 ರೂಪಾಯಿ, ಪುಟಾಣಿ-78 ರೂಪಾಯಿ, ಡಾಣಿ-ಗುಳಗಿ-150 ರೂಪಾಯಿ ಇದೆ. ಅದಕ್ಕೆ ತಕ್ಕಂತೆ ಹಣ್ಣು, ಹೂ, ಕಾಯಿ, ವೀಳ್ಯದೆಲೆ, ಅಡಕೆ ಮತ್ತಿತರ ವಸ್ತುಗಳ ದರವೂ ಹೆಚ್ಚಳವಾಗಿದೆ. ಪಟ್ಟಣದಲ್ಲಿ ಕಿರಾಣಿ, ಬಟ್ಟೆ, ಆಭರಣ, ಅಲಂಕಾರಿಕ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಪಂಚಮಿ ಹೆಣ್ಮಕ್ಕಳ ಪಾಲಿಗೆ ದೊಡ್ಡ ಹಬ್ಬಾ, ಹೋದ ವರ್ಷಾನೂ ಕರೊನಾದಿಂದ ಹಬ್ಬ ಮಾಡಲಾಗಲಿಲ್ಲ. ಈ ವರ್ಷ ಮನೀ ಮಂದಿಯೆಲ್ಲ ದುಡದ ನಾಲ್ಕು ದುಡ್ಡಿನ್ಯಾಗ್ ಹಬ್ಬದ ಸಂತಿ ಮಾಡಕ ಬಂದೇವ್ರೀ. ಎಲ್ಲ ವಸ್ತುಗಳ ಬೆಲೆ ಹೆಚ್ಚ ಆಗೇತ್ರಿ. ಅದಕ್ಕ ಒಂದಷ್ಟು ಲೆಕ್ಕಾಚಾರ ಮಾಡಿ ಸಾಮಾನು ತಗೋಬೇಕಾಗೈತ್ರಿ. ಹಿರ್ಯಾರ ಕಾಲದಿಂದ ಮಾಡಕೊಂಡ ಬಂದ ಹಬ್ಬ ಹ್ಯಾಂಗ್ ಬಿಡಾಕ್ ಬರತೈತ್ರಿ?| ಸೋಮವ್ವ ಲಮಾಣಿ, ಅಕ್ಕಿಗುಂದ ತಾಂಡಾ ಮಹಿಳೆಹಬ್ಬಗಳು ನಾಡಿನ ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕ. ಪ್ರಸ್ತುತ ಆರ್ಥಿಕ ಮುಗ್ಗಟ್ಟು, ಕೋವಿಡ್ ಸಂಕಷ್ಟ, ಬೆಲೆ ಏರಿಕೆಯಿಂದ ಹಬ್ಬ ಭರ್ಜರಿಯಾಗಿ ಆಚರಿಸುವ ಪರಿಸ್ಥಿತಿಯಿಲ್ಲ. ಆದರೆ, ಸಂಪ್ರದಾಯ ಬಿಡಲು ಬಾರದು. ಅಲ್ಲದೆ, ಧರ್ಮ ಪಾಲನೆ, ಮಾನಸಿಕ ನೆಮ್ಮದಿ- ಶಾಂತಿಗಾಗಿ ಸರಳವಾಗಿ ಕೋವಿಡ್ ನಿಯಮ ಪಾಲಿಸುವ ಮೂಲಕ ಸರಳವಾಗಿ ಹಬ್ಬ ಆಚರಣೆ ಮಾಡಬೇಕು.| ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net