ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 8ಕ್ಕೇರಿದ ಮೃತರ ಸಂಖ್ಯೆ, ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

accident
Published on

ಧಾರವಾಡ: ತಾಲೂಕಿನ ಬಾಡ ಕ್ರಾಸ್ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿದ್ದು, ಮೃತರ ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ.

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಯುವ ಮಂಜುನಾಥ ಮತ್ತು ಸವದತ್ತಿಯ ರೂಪಾ ಅವರ ಮದುವೆ ಶನಿವಾರ ನಿಗದಿಯಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವರನ ಸ್ವಗೃಹದ ಬಳಿಯೇ ಮದುವೆ ಅದ್ದೂರಿಯಾಗಿ ನಡೆಯಲಿತ್ತು. ಆದರೆ ಮಳೆಯಿಂದಾಗಿ ಮದುವೆಯನ್ನ ಮನಸೂರ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆಸಲು ಕುಟುಂಬಸ್ಥರು ಕೊನೇ ಗಳಿಗೆಯಲ್ಲಿ ನಿರ್ಧರಿಸಿದ್ದರು. ಅದರಂತೆ ಶುಕ್ರವಾರ ರಾತ್ರಿ ಮನೆಯಲ್ಲೇ ನಿಶ್ಚಿತಾರ್ಥ ಮುಗಿಸಿದ್ದರು. ಶನಿವಾರ ಬೆಳಗಿನ ಜಾವ ಎಲ್ಲರೂ ಮದುವೆ ಮಂಟಪಕ್ಕೆ ಹೊರಟಿದ್ದರು. ದಿಬ್ಬಣ ಹೊರಟ ಕ್ರೂಸರ್​ ವಾಹನ ಮಾರ್ಗಮಧ್ಯೆ ಮರಕ್ಕೆ ಡಿಕ್ಕಿ ಹೊಡೆದು ಪಲ್ಡಿಯಾಗಿದೆ. ಅಪಘಾತದ ಭೀಕರತೆಗೆ ವರನ ಸಂಬಂಧಿಕರಾದ ಮಹೇಶ್ವರಯ್ಯ(11), ಅನನ್ಯ(14), ಹರೀಶ(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಶಂಭುಲಿಂಗಯ್ಯ (35) ಅವರು ಸ್ಥಳದಲ್ಲೇ ಮೃತಪಟ್ಟರು. ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಚನ್ನವ್ವ(45) ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸುಮಾರು 7 ಜನರ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ವರನ ಅಕ್ಕನ ಮಕ್ಕಳು ಮತ್ತು ಅಣ್ಣನ ಮಕ್ಕಳಿ, ಚಿಕ್ಕಮ್ಮ, ಅತ್ತಿಗೆ ಎಲ್ಲರೂ ಸೇರಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ನಾಲ್ವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಸ್ವಗ್ರಾಮಗಳಿಗೆ ರವಾನಿಸಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮಕ್ಕೆ ಅನನ್ಯಳ ಮೃತದೇಹ, ನಿಗದಿ ಗ್ರಾಮಕ್ಕೆ ಶಿವಲಿಂಗಯ್ಯ ಹಿರೇಮಠ, ಧಾರವಾಡಕ್ಕೆ ನೀಲವ್ವ, ಮೊರಬ ಗ್ರಾಮಕ್ಕೆ ಚನ್ನವ್ವ ಬಣಕಾರ ಅವರ ಶವ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net