

ವಿಜಯವಾಣಿ ಸುದ್ದಿಜಾಲ ನರೇಗಲ್ಲ
ಭಕ್ತ ಹೆಚ್ಚೋ? ಭಗವಂತ ಹೆಚ್ಚೋ? ಎಂಬ ಪ್ರಶ್ನೆ ಬಂದಾಗ ಭಕ್ತನೇ ಹೆಚ್ಚು ಎನ್ನುವ ಉತ್ತರ ದೊರಕುತ್ತದೆ. ಏಕೆಂದರೆ ಭಕ್ತ ತನ್ನ ಭಕ್ತಿಯಿಂದ ಭಗವಂತನನ್ನೂ ಸೋಲಿಸಬಲ್ಲ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಯಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪುರಾಣ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಂಬಿಕೆ ಇದ್ದರೆ ಜೀವನ ಸರಳ, ಸುಸೂತ್ರವಾಗುತ್ತದೆ. ಎಲ್ಲದಕ್ಕೂ ನಂಬಿಕೆ ಮೂಲ ಕಾರಣವಾಗಿದೆ. ದಂಪತಿ ನಡುವಿನ ನಂಬಿಕೆೆಯೇ ದಾಂಪತ್ಯ ಜೀವನದ ಯಶಸ್ಸಿನ ಗುಟ್ಟಾಗಿದೆ. ಇದನ್ನು ಅರಿತು ದಂಪತಿ ಪರಸ್ಪರ ನಂಬಿಕೆ ಮೇಲೆ ತಮ್ಮ ಜೀವನ ನಡೆಸಿದರೆ ಅವರ ಬಾಳು ಬಂಗಾರವಾಗುತ್ತದೆ. ನಂಬಬೇಕೆಂದರೆ ಯಾರನ್ನು ನಂಬಬೇಕೆಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕಿರುವ ಉತ್ತರ ಒಂದೇ. ಯಾರಲ್ಲಿ ನಿಷ್ಕಲ್ಮಷ ಭಾವನೆ ಇರುತ್ತದೆಯೋ ಅಂತಹವರನ್ನು ಮಾತ್ರ ನಂಬಬೇಕೆಂದು ಶಾಸ್ತ್ರ ಹೇಳುತ್ತದೆ. ಭಕ್ತ ಭಗವಂತನನ್ನು ನಂಬಬೇಕು. ಅವನಲ್ಲಿ ಅಚಲ ಭಕ್ತಿಯನ್ನಿಡಬೇಕು. ಅಚಲ ಭಕ್ತಿಯು ಎಂದಿಗೂ ಸೂಕ್ತ ಫಲವನ್ನೇ ಕೊಡುತ್ತದೆ. ಜೀವನದ ಕಷ್ಟಗಳನ್ನು ಧೈರ್ಯವಾಗಿ ಎದುರಿಸಬೇಕು. ಕಷ್ಟಕ್ಕೆ ಹೆದರಿ ಬದುಕಿಗೆ ಎಂದಿಗೂ ಬೆನ್ನು ಹಾಕಬಾರದು. ಅವುಗಳನ್ನು ಎದುರಿಸಲು ನಿಮಗೆ ಪುರಾಣ, ಪ್ರವಚನಗಳು ಮಾರ್ಗದರ್ಶನ ನೀಡುತ್ತವೆ ಎಂದು ಸದಾಶಿವ ಸ್ವಾಮೀಜಿ ಹೇಳಿದರು.
ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಮನುಷ್ಯನಿಗೆ ಅಹಂಕಾರ ಇರಬಾರದು. ಅಹಂಕಾರ ಇರುವ ಮನುಷ್ಯ ಎಂದಿಗೂ ಜೀವನದಲ್ಲಿ ಎತ್ತರಕ್ಕೆ ಏರಲಾರ. ಎಲ್ಲರೊಂದಿಗೆ ಬೆರೆತು ಬಾಳುವುದೇ ನಿಜವಾದ ಸ್ವರ್ಗ ಸುಖ. ಇದನ್ನು ತಿಳಿಸಿ ಹೇಳುವುದಕ್ಕಾಗಿಯೆ ಜಾತ್ರಾ ಮಹೋತ್ಸವ ಸಂದರ್ಭಗಳಲ್ಲಿ ಪುರಾಣ ಪ್ರವಚನಗಳನ್ನು ಹೇಳಿಸಲಾಗುತ್ತಿದೆ ಎಂದರು.
ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ಪ್ರಭು ಮಾಸ್ತರ ಭೂಸನೂರಮಠ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಣ್ಣ ಸೂಡಿ, ಮಲ್ಲನಗೌಡ ಪಾಟೀಲ, ಬಸವರಾಜ ಅಣಗೌಡ್ರ, ಬಸವರಾಜ ಅರಮನಿ ಇತರರಿದ್ದರು. ಶಿಕ್ಷಕ ರಮೇಶ ಉಳ್ಳಾಗಡ್ಡಿ ನಿರೂಪಿಸಿದರು. ಶರಣಪ್ಪ ಅರಮನಿ ಸ್ವಾಗತಿಸಿದರು.