

ಹುಬ್ಬಳ್ಳಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದರ ಜತೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ. ಈ ಸಂದೇಶವನ್ನು ಭಾರತೀಯರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕಸಿತ ಭಾರತ ಸಂಕಲ್ಪದೊಂದಿಗೆ ದೇಶಾದ್ಯಂತ ವಿಡಿಯೋ ವ್ಯಾನ್‌ಗಳನ್ನು ಎಲ್ಲ ಕಡೆ ಕಳಿಸುತ್ತಿದ್ದೇವೆ. ಮೋದಿ ಅವರ ಗ್ಯಾರಂಟಿ, ಸಾಧನೆ, ಮುಂದಿನ ದಿನಗಳಲ್ಲಿನ ಸಂಕಲ್ಪಗಳನ್ನು ಜನರಿಗೆ ಮನವರಿಕೆ ಮಾಡಲಾಗುವುದು. ಭಾರತವನ್ನು 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲಾಗುವುದು ಎಂದರು.
ಊಹಾಪೋಹ ಬೇಡ: 8 ಬಾರಿ ಸಂಸದರು ಆದವರಿಗೆ ಟಿಕೆಟ್ ಕೊಡಲಾಗಿದೆ. 2ನೇ ಬಾರಿ ಗೆದ್ದವರನ್ನೂ ಕೈಬಿಡಲಾಗಿದೆ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ಟಿಕೆಟ್ ಹಂಚಿಕೆ ವಿಷಯದಲ್ಲಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಿ, ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸಲಿದ್ದಾರೆ. ಚುನಾವಣೆ ಸಮಿತಿ ಸಭೆ ಇದೆ. ಹಾಗಾಗಿ ನಾನೂ ಮತ್ತು ಯಡಿಯೂರಪ್ಪ ಅವರು ದೆಹಲಿಗೆ ಹೊರಟಿದ್ದೇವೆ ಎಂದರು.
ಚಾಲನೆ: ಬಿಜೆಪಿ ಪ್ರಣಾಳಿಕೆ, ಅಭಿಪ್ರಾಯ ಸಂಗ್ರಹ ವಾಹಗಳಿಗೆ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ಗೋಕುಲ ರಸ್ತೆಯ ರಧಾಕೃಷ್ಣ ನಗರದಲ್ಲಿ ಚಾಲನೆ ನೀಡಿದರು. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್ಲ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಇತರರು ಇದ್ದರು.