

ಆನಂದಪುರ: ಮಹಿಳಾ ಸಬಲೀಕರಣ ಕಾರ್ಯಕ್ಕೆ ರಾಜ್ಯ ಸರ್ಕಾರ ದೃಢ ಸಂಕಲ್ಪ ಹೊಂದಿದ್ದು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್‌ಕುಮಾರ್ ತಿಳಿಸಿದರು. ಗ್ರಾಪಂ ಆಯೋಜಿಸಿದ್ದ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಇಡೀ ಕುಟುಂಬ ಪ್ರಗತಿಗೊಳ್ಳುತ್ತದೆ. ಇದರಿಂದ ಪರೋಕ್ಷವಾಗಿ ಇಡೀ ಸಮುದಾಯ, ಗ್ರಾಮ ಪ್ರಗತಿಯತ್ತ ಸಾಗಬಲ್ಲದು ಎಂದರು. ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆ, ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ರೂ. ನೀಡುವುದು ಇವೆಲ್ಲವೂ ಮಹಿಳೆಯರ ಪ್ರಗತಿಗೆ ಇರುವ ಯೋಜನೆಗಳು ಎಂದರು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸವೂ ಸೇರಿ ಕುಟುಂಬದ ಸರ್ವ ರೀತಿಯ ಪ್ರಗತಿಗೆ ಮಹಿಳೆಯರು ಪ್ರಾಮಾಣಿಕ ಪ್ರಯತ್ನ ನಡೆಸಬಲ್ಲರು ಎಂದರು. ಗ್ರಾಪಂಉಪಾಧ್ಯಕ್ಷೆ ರೂಪಾ ನಾಗರಾಜ್ ಮಾತನಾಡಿ ಮಹಿಳೆಯರು ಎಲ್ಲ ಕಾಲದಲ್ಲಿಯೂ ಗೌರವಾರ್ಹರು. ಈಗ ಸರ್ಕಾರ ಸಹ ಮಹಿಳೆಯರನ್ನು ಗೌರವಿಸುವ ಮೂಲಕ ನಾಡಿನ ಪ್ರಗತಿಗೆ ನಾಂದಿ ಹಾಡಿದೆ ಎಂದರು. ಗ್ರಾಪಂನ ಎಲ್ಲ ಸದಸ್ಯರು, ಪಿಡಿಒ ಹನ್ೀ, ಕಾರ್ಯದರ್ಶಿ ಚಂದ್ರಕುಮಾರ್, ಕಂದಾಯ ಇಲಾಖೆಯ ಕವಿರಾಜ್, ಸಾರ್ವಜನಿಕರು ಪಾಲ್ಗೊಂಡಿದ್ದರು.