ಪಣಸ ಚೌಡನಹಳ್ಳಿಯಲ್ಲಿ ಸೌಲಭ್ಯ ವಂಚಿತ ದಲಿತ ಕಾಲನಿ

22 cmy 4A
Published on

ಚಿಂತಾಮಣಿ: ನಗರ ಸೇರಿ ಗ್ರಾಮಾಂತರದಲ್ಲಿ ದಲಿತರ, ದಲಿತಕೇರಿಗಳ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಕೋಟ್ಯಂತರ ರೂಪಾಯಿಗಳನ್ನು ವಿವಿಧ ಯೋಜನೆಗಳ ಅಡಿ ವ್ಯಯ ಮಾಡುತ್ತಿವೆೆ. ಆದರೆ ತಾಲೂಕಿನ ಆನೂರು ಗ್ರಾಪಂ ವ್ಯಾಪ್ತಿಯ ಪಣಸ ಚೌಡನಹಳ್ಳಿಯಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.

ಗ್ರಾಮದ ದಲಿತರ ಕಾಲನಿಯಲ್ಲಿ ಹಲವು ದಶಕಗಳಿಂದ ನೀರು ಹರಿಯುವ ಕಲ್ಯಾಣಿ ಇದ್ದು, ಗ್ರಾಮದ ಇತರ ಜನಾಂಗದ ಕುಟುಂಬಗಳು ವಾಸವಾಗಿರುವ ಪ್ರದೇಶಗಳಿಂದ ಮಳೆ ನೀರು ಕಾಲನಿಯಲ್ಲಿರುವ ಈ ಕಲ್ಯಾಣಿಗೆ ಸೇರಿ, ಕಸ ಕಡ್ಡಿ ತುಂಬಿ ಕೊಳೆತು ಗಬ್ಬು ನಾತ ಬಿರುತ್ತಿದೆ. ಇದರಿಂದ ದಲಿತರ ಮನೆಗಳಿಗೆ ವಿಷ ಜಂತುಗಳ ಉಪಟಳ ಜಾಸ್ತಿಯಾಗಿದೆ. ದಲಿತ ಕೇರಿಯ ನಿವಾಸಕ್ಕೆ ಹಾವು, ಚೇಳಿನಂಥ ವಿಷಜಂತುಗಳು ನುಗ್ಗುತ್ತಿದ್ದು ಮಳೆಗಾಲದಲ್ಲಿ ಗ್ರಾಮದ ಜನತೆ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಳ್ಳುವಂತಾಗಿದೆ. ಈಗಾಗಲೇ ಕೆಲವರು ಕೊಳಚೆ ನೀರಿನಿಂದ ಹಲವು ಕಾಯಿಲೆಗಳಿಗೆ ತುತ್ತಾಗಿ, ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ದುರ್ವಾಸನೆಗೆ, ರಾತ್ರಿ ಇಡೀ ಕಪ್ಪೆಗಳ ಕಿರುಚಾಟಕ್ಕೆ ಕಾಲನಿಯ ನಿವಾಸಿಗಳು ತತ್ತರಗೊಂಡಿದ್ದಾರೆ. ಕಾಲನಿಯ ವಿದ್ಯಾರ್ಥಿಗಳು, ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗ್ರಾಮದ ದಲಿತ ಮುಖಂಡ ಅಂಜನಪ್ಪ, ಮೂರ್ನಾಲ್ಕು ತಿಂಗಳ ಹಿಂದೆ ತಾಪಂ ಇಒ, ಅಭಿವೃದ್ಧಿ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಗಮಿಸಿ ನೀರು ಸರಾಗವಾಗಿ ಹರಿಯಲು ನರೇಗಾ ಯೋಜನೆ ಅಡಿ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು. ಆದರೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಪಿಡಿಒ ಹರೀಶ್​ ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಪಿಡಿಒ ಹರೀಶ್​ರನ್ನು ಅಮಾನತುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳು ದಲಿತರಿಗೆ ನ್ಯಾಯ ನೀಡಬೇಕಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net