

ಮಡಿಕೇರಿ: ಬೆಳೆಗಾರರ ೧೦ ಎಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಘೋಷಿಸಿದ್ದು, ಯಾವುದೇ ಕಾರಣಕ್ಕೂ ಬಿಲ್ ಪಾವತಿಗೆ ಒತ್ತಡ ಹೇರಬಾರದು ಮತ್ತು ವಿದ್ಯುತ್ ಕಡಿತಗೊಳಿಸಬಾರದೆಂದು ಸುಂಟಿಕೊಪ್ಪದ ಬೆಳೆಗಾರರು ಒತ್ತಾಯಿಸಿದ್ದಾರೆ.
ಬೆಳೆಗಾರರ ನಿಯೋಗ ಶಾಸಕದ್ವಯರಾದ ಮಡಿಕೇರಿ ಶಾಸಕರು, ಕೆ.ಜಿ.ಬೋಪಯ್ಯ ಹಾಗೂ ಮೈಸೂರು ವಿಭಾಗದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಅವರುಗಳನ್ನು ಭೇಟಿಯಾಗಿ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಕ್ಕೆ ಮುಂದಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜಯವಿಭವ ಸ್ವಾಮಿ, ಸರ್ಕಾರದಿಂದ ಮೌಖಿಕ ಆದೇಶವಷ್ಟೇ ಬಂದಿದೆ. ಲಿಖಿತ ಆದೇಶ ಬರುವವರೆಗೆ ಸಹಕರಿಸಿ ಎಂದು ಮನವಿ ಮಾಡಿದರು.
ಬೆಳೆಗಾರರು ಮಾತನಾಡಿ, ಸರ್ಕಾರದಿಂದ ಲಿಖಿತ ಆದೇಶ ಬರುವವರೆಗೆ ವಿದ್ಯುತ್ ಬಿಲ್ ಪಾವತಿಗಾಗಿ ಒತ್ತಡ ಹೇರಬಾರದು ಮತ್ತು ವಿದ್ಯುತ್ ಕಡಿತಕ್ಕೆ ಮುಂದಾಗಬಾರದು ಎಂದು ಒತ್ತಾಯಿಸಿದ ಅವರು, ಅಕಾಲಿಕ ಮಳೆಯಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬಾಕಿ ಬಿಲ್ ಪಾವತಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕರುಗಳು ಮಾತನಾಡಿ, ಸರ್ಕಾರದೊಂದಿಗೆ ಚರ್ಚಿಸಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಫಿ ಬೆಳೆಗಾರರಾದ ಚಂದ್ರಶೇಖರ್ ಹೇರೂರು, ಕ್ಲಿವ ಪೊನ್ನಪ್ಪ, ದಾಸಂಡ ರಮೇಶ್ ಚೆಂಗಪ್ಪ, ಎಂ.ಎನ್.ಗೌತಮ್, ಅರುಣ್ ಚೆಂಗಪ್ಪ, ಅರ್ಪಿತ್, ಬಿ.ಜಿ.ರಮೇಶ್, ಜಗನಾಥ್ ಮತ್ತಿತರ ಪ್ರಮುಖರು ನಿಯೋಗದಲ್ಲಿದ್ದರು.