

ಹೊಸದುರ್ಗ: ಸಮಾಜಕ್ಕೆ ಸಮರ್ಪಿತವಾದ ಸ್ವಾರ್ಥವಿಲ್ಲದ ಬದುಕು ಸರ್ವ ಕಾಲಕ್ಕೂ ಸಾರ್ಥಕ ಹಾಗೂ ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.
ಭಾವಸಾರ ಕ್ಷತ್ರಿಯ ಸಮಾಜ ಮಹಾದೇವ್ ರಾವ್ ಗೋವಿಂದ ರಾವ್ ತೇಲ್ಕರ್ ಅವರ 169ನೇ ಜನ್ಮದಿನೋತ್ಸವದ ಅಂಗವಾಗಿ ಪಟ್ಟಣದ ವಿಠಲ ರುಕುಮಾಯಿ ದೇವಾಲಯದಲ್ಲಿ ಗುರುವಾರ ಆಯೋಜಿಸಿದ್ದ ನುಡಿ-ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಣ್ಣ ಸಮುದಾಯವಾದ ಭಾವಸಾರ ಸಮಾಜವನ್ನು ಸಂಘಟಿಸಿದ ಕೀರ್ತಿ ಮಹಾದೇವ್ ರಾವ್ ಗೋವಿಂದ ರಾವ್ ತೇಲ್ಕರ್ ಅವರಿಗೆ ಸಲ್ಲುತ್ತದೆ. ಅವರು 1911ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾವಸಾರ ಮಹಾಸಭಾವನ್ನು ಸ್ಥಾಪಿಸಿದರು. 1913 ರವರೆಗೆ ಅಧ್ಯಕ್ಷರಾಗಿ ಸಮಾಜದ ಅಭಿವೃದ್ಧಿಗೆ ಕಾರಣರಾದರು ಎಂದು ಸ್ಮರಿಸಿದರು.
ಯುವಕರು ಇಂತಹ ಮಹನೀಯರ ಆದರ್ಶಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡರೆ ಹೆಚ್ಚಿನ ಸಾಧನೆಗೆ ಅವಕಾಶ ದೊರೆಯುತ್ತದೆ. ಭಾವಸಾರ ಕ್ಷತ್ರಿಯ ಸಮಾಜ ಹಿಂದುಳಿದ ಸಮಾಜವಾದರೂ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಎಂದರು.
ಭಾವಸಾರ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ್ ಗುಜ್ಜಾರ್ ಮಾತನಾಡಿ, ಮಹದೇವ ರಾವ್ ತೇಲ್ಕರ್ ಭಾವಸಾರ ಸಮಾಜದ ಕೀರ್ತಿಯ ಕಳಶವಾಗಿದ್ದಾರೆ. ಅವರ ಬದುಕು ಮತ್ತು ಆದರ್ಶಗಳನ್ನು ನಮಗೆ ದಾರಿದೀಪವಾಗಿವೆ. ಅದರ ಬೆಳಕಿನಲ್ಲಿ ಸಂಘಟನೆಯನ್ನು ಬಲಪಡಿಸಬೇಕಿದೆ ಎಂದು ತಿಳಿಸಿದರು.
ಭಾವಸಾರ ಸಮುದಾಯದ ಅಭಿವೃದ್ಧಿಗೆ ಗುರುಪೀಠ ಸ್ಥಾಪನೆ ಅಗತ್ಯವಿದೆ. ಗುರುಗಳು ದೊರೆತರೆ ಸಂಘಟನೆಗೆ ಬಲ ಬರಲಿದೆ. ರಾಜ್ಯದಲ್ಲಿ ಹಿಂಗುಲಾಜ ಮಾತ ಶಕ್ತಿ ಪೀಠವನ್ನು ಸ್ಥಾಪಿಸಿದರೆ ಸಮುದಾಯದ ಜನರ ಧಾರ್ವಿಕ ಆಚರಣೆಗಳಿಗೆ ಅನುಕೂಲವಾಗುತ್ತದೆ ಎಂದರು.
ವಕೀಲ ಗಂಗಾಧರ್, ಮುಖಂಡರಾದ ಮೋಹನ್ ಗುಜ್ಜಾರ್, ಸಂಜು ಹೋವಳೆ ಇತರರಿದ್ದರು.