ಅವನತಿಯತ್ತ ಐತಿಹಾಸಿಕ ಬಾವಿಗಳು

03_RON_SAADHU AJJANA BAAVI
Published on

ರೋಣ: ದ್ರೋಣಾಪುರ ಎಂದು ಕರೆಯಿಸಿಕೊಳ್ಳುತ್ತಿದ್ದ ಇಂದಿನ ರೋಣ ಪಟ್ಟಣವು ಹಲವು ವಿಶೇಷತೆಗಳ ಆಗರ. ಇಲ್ಲಿನ ಪುರಾತನ ಬಾವಿಗಳು, ಕಲ್ಯಾಣಿಗಳು ಗತಕಾಲದ ವೈಭವವನ್ನು ಸಾರಿ ಹೇಳುತ್ತವೆ. ಪ್ರಾಚೀನ ಕಾಲದ ಕೆತ್ತನೆಗಳು ನೋಡುಗರ ಹೃನ್ಮನವನ್ನು ಪುಳಕಿತಗೊಳಿಸುತ್ತವೆ. ಆದರೆ, ನಿರ್ವಹಣೆಯ ಕೊರತೆಯಿಂದ ಹಲವು ಬಾವಿಗಳು ಅವನತಿಯ ಹಾದಿ ಹಿಡಿದಿರುವುದು ಶೋಚನೀಯ ಸಂಗತಿಯಾಗಿದೆ.

ಪಣಿಯಪ್ಪಗೌಡ್ರ ಬಾವಿ, ಅಜ್ಜಮ್ಮನ ಬಾವಿ, ಸಾಧು ಅಜ್ಜನ ಬಾವಿ, ಶಾಂಬರ ಬಾವಿ, ಪುರದಪ್ಪನ ಬಾವಿ, ಕರಬಶೆಟ್ಟರ್ ಬಾವಿ, ಹುಲಿಯವರ ಬಾವಿ, ಗಡ್ಡದ ಅಜ್ಜನ ಬಾವಿ, ಬಾಬಾಸಾಬನ ಬಾವಿ ಸೇರಿದಂತೆ ಪಟ್ಟಣದಲ್ಲಿ ಒಟ್ಟು 9 ಪ್ರಮುಖ ಬಾವಿಗಳಿವೆ. ಈ ಪೈಕಿ, ಅಜ್ಜಮ್ಮನ ಬಾವಿ ಹಾಗೂ ಪುರದಪ್ಪನ ಬಾವಿಯ ನೀರು ಇಂದಿಗೂ ಬಳಕೆಗೆ ಯೋಗ್ಯವಾಗಿದೆ. ಇತರೆ ಬಾವಿಗಳಲ್ಲಿ ನೀರಿನ ಸೆಲೆ ಇಲ್ಲದಂತಾಗಿದೆ. ಪಟ್ಟಣದ ಐತಿಹಾಸಿಕ ಬಾವಿಗಳು ವಾಸ್ತುಶಿಲ್ಪದ ಭವ್ಯತೆಯನ್ನು ಸಾರುತ್ತವೆ. ಕಟ್ಟಡ ಶೈಲಿ, ಭದ್ರತೆಗೆ ನೀಡಿರುವ ಆದ್ಯತೆ, ನಿರ್ವಣಕ್ಕೆ ಬಳಸಿದ ಕಲ್ಲು ಬಂಡೆಗಳು ಹಿಂದಿನ ಕಾಲದ ಜನರ ದೂರದೃಷ್ಟಿಯ ಪ್ರತೀಕವಾಗಿವೆ. ಸಂಪೂರ್ಣ ಕಲ್ಲು ಬಂಡೆಗಳ ಗೋಡೆಗಳಿಂದ ಆವೃತವಾದ ಬಾವಿಗಳನ್ನು ನೋಡುವುದೇ ಸೋಜಿಗ. ಕೆಲವು ಬಾವಿಗಳಲ್ಲಿ ಇಂದಿಗೂ ಜಲದ ಸೆಲೆ ಬತ್ತಿಲ್ಲ. ಆದರೆ, ನಿರ್ವಹಣೆಯ ಕೊರತೆಯಿಂದ ನಿರುಪಯುಕ್ತವಾಗಿವೆ.

ಪಣಿಯಪ್ಪಗೌಡ್ರ ಬಾವಿ: ಸುಮಾರು ನಾಲ್ಕು ಶತಮಾನಗಳ ಭವ್ಯ ಇತಿಹಾಸ ಹೊಂದಿರುವ ಪಣಿಯಪ್ಪಗೌಡ್ರ ಬಾವಿ ದ್ರೋಣಾಪುರದ ಹೆಸರನ್ನು ಉತ್ತುಂಗಕ್ಕೇರಿಸಿತ್ತು. ಅತ್ಯಂತ ಭದ್ರವಾಗಿರುವ ಹಾಗೂ ವಿಶಿಷ್ಟ ವಾಸ್ತು ಶಿಲ್ಪದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಂಪೂರ್ಣ ಕಲ್ಲು ಬಂಡೆಗಳಿಂದ ಬಾವಿಯ ಗೋಡೆಗಳನ್ನು ನಿರ್ವಿುಸಲಾಗಿದೆ. ಬಾವಿಯ ಆಳದಿಂದ 100 ಅಡಿಗಳಷ್ಟು ಎತ್ತರ ಕಾಡುಗಲ್ಲಿನಿಂದ ನಿರ್ವಣವಾಗಿದೆ. ಈ ಪುರಾತನ ಬಾವಿಯನ್ನು ಒಮ್ಮೆ ಸುತ್ತುಹಾಕಿದರೆ ಶಿಲ್ಪಕಲಾ ವೈಭವ ಗೋಚರಿಸುತ್ತದೆ. ಈ ಬಾವಿಯು ವಿಶಾಲವಾದ ಪ್ರವೇಶ ದ್ವಾರ ಹೊಂದಿದ್ದು, ಹನುಮಾನ ಹಾಗೂ ನಂದಿಯ ದೇವಸ್ಥಾನಗಳು ಭಕ್ತರನ್ನು ಆಕರ್ಷಿಸುತ್ತವೆ. ಆದರೆ, ಈ ಬಾವಿ ಇದೀಗ ನಿರ್ವಹಣೆ ಕಾಣದೇ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಸುತ್ತಲೂ ಮುಳ್ಳು ಕಂಟಿ ಆವರಿಸಿದ್ದು, ಜೂಜುಕೋರರ ಅಡ್ಡೆಯಾಗಿ ಮಾರ್ಪಟ್ಟಿದೆ.

ಅಜ್ಜಮ್ಮನ ಬಾವಿ: ಶತಮಾನಕ್ಕೂ ಹಳೆಯದಾದ ಅಜ್ಜಮ್ಮನ ಬಾವಿಯನ್ನು ರೋಣ ಪಟ್ಟಣದ ಜನರು ಹಲವಾರು ತಿಂಗಳುಗಳ ಕಾಲ ಪರಿಶ್ರಮಪಟ್ಟು ನಿರ್ವಿುಸಿದ್ದಾರೆ ಎನ್ನುತ್ತಾರೆ ಪಟ್ಟಣದ ಹಿರಿಯ ನಾಗರಿಕರು. ಬಾವಿ ನಿರ್ವಣವಾದ ದಿನದಿಂದ ಇಲ್ಲಿಯವರೆಗೂ ಬತ್ತಿಲ್ಲ. ಇದು ಹಲವಾರು ವರ್ಷಗಳವರೆಗೆ ಪಟ್ಟಣದ ಜನರ ದಾಹ ನೀಗಿಸಿದೆ. ನಂತರದ ದಿನಗಳಲ್ಲಿ ಮನೆ, ಮನೆಗಳಿಗೆ ನಳ ಬಂದ ನಂತರ ಈ ಬಾವಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಪರಿಣಾಮ ಬಾವಿಯ ತುಂಬ ಗಿಡ-ಗಂಟೆಗಳು ಬೆಳೆದು ಹೂಳು ತುಂಬಿಕೊಂಡಿದೆ. ಬಾವಿಯಲ್ಲಿನ ನೀರು ಮಲಿನವಾಗಿದೆ.

ಜಿಗಳೂರ ರಸ್ತೆಯ ಪುರದಪ್ಪನ ಬಾವಿ: ಈ ಬಾವಿಗೆ ನೀರಿನ ಅಕ್ಷಯ ಪಾತ್ರೆ ಎನ್ನುವ ಹೆಸರಿದೆ. ಬಿರು ಬೇಸಿಗೆಯಲ್ಲೂ ಇಲ್ಲಿ ನೀರಿನ ಕೊರತೆಯಾಗಿಲ್ಲ. ಹೊಲಕ್ಕೆ ಹೋಗುವ ಜನರು ಜಿಗಳೂರ ರಸ್ತೆಯ ಪುರದಪ್ಪನ ಬಾವಿಯ ನೀರು ಕುಡಿದೇ ಮುಂದೆ ಸಾಗುತ್ತಾರೆ. ಇದು ಸುಮಾರು 75 ಅಡಿ ಆಳ, 35 ಅಡಿ ಅಗಲವಿದ್ದು ಸದಾ ಕಾಲ ನೀರು ತುಂಬಿರುತ್ತದೆ. ಈ ಬಾವಿಯ ಜಲದಿಂದ ಸುತ್ತಲಿನ ಕೊಳವೆ ಬಾವಿಗಳು ಕೂಡ ಪುನಶ್ಚೇತನಗೊಂಡು ಸಮೃದ್ಧವಾಗಿ ನೀರೊದಗಿಸುತ್ತಿವೆ. ಬಾವಿಗೆ ಹೊಂದಿಕೊಂಡು ಬಸವಣ್ಣ ಹಾಗೂ ಶಿವಲಿಂಗ ಗುಡಿ ನಿರ್ವಿುಸಲಾಗಿದ್ದು, ಹೊಲದಲ್ಲಿ ದುಡಿದು ಬಸವಳಿದ ರೈತರು ಕೆಲಕಾಲ ಇಲ್ಲಿ ವಿಶ್ರಾಂತಿ ಪಡೆದು ದಣಿವಾರಿಸಿಕೊಳ್ಳುತ್ತಾರೆ.

ಸಾಧು ಅಜ್ಜನ ಹಾಗೂ ಶಾಂಬರ ಬಾವಿ: ಒಂದು ಕಾಲದಲ್ಲಿ ಜನರ ನೀರಿನ ದಾಹ ತೀರಿಸುತ್ತಿದ್ದ ಈ ಬಾವಿಗಳು ಪವಿತ್ರತೆಯ ಸಂಕೇತವಾಗಿವೆ. ಪಟ್ಟಣದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ನಡೆದರೆ ಅದಕ್ಕೆ ಇಲ್ಲಿಂದಲೇ ನೀರು ತೆಗೆದುಕೊಂಡು ಹೋಗುವುದು ವಾಡಿಕೆ. ಇಂತಹ ಐತಿಹಾಸಿಕ ಬಾವಿ ಕೂಡ ಅವನತಿಯತ್ತ ಸಾಗುತ್ತಿದೆ. ಜನ-ಜಾನುವಾರುಗಳು ಆಯ ತಪ್ಪಿ ಬಾವಿಯಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚಿರುವುದರಿಂದ ಈ ಬಾವಿಗಳ ಸುತ್ತ ತಡೆಗೋಡೆ ನಿರ್ವಿುಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ರೋಣ ಪಟ್ಟಣದಲ್ಲಿರುವ ಪುರಾತನ ಬಾವಿಗಳು ಅಧ್ಯಯನಕ್ಕೆ ಪೂರಕವಾಗಿವೆ. ಅವುಗಳ ಜೀಣೋದ್ಧಾರ ಮಾಡುವುದು ಅಗತ್ಯವಾಗಿದೆ. ಕಸ-ಕಂಟಿಗಳು ತುಂಬಿದ ಬಾವಿಗಳ ಹೂಳೆತ್ತುವ ಕಾರ್ಯವಾಗಬೇಕು. ಹಳೆಯ ಬಾವಿಗಳ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಬೇಕು. ಪುರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. | ಮಲ್ಲಯ್ಯ ಮಹಾಪುರುಷಮಠ ಪುರಸಭೆ ಸದಸ್ಯ

ರೋಣ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಹೊಳೆ-ಹಳ್ಳ-ಕೊಳ್ಳಗಳಿಲ್ಲ. ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದು, ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹೀಗೆಯೇ ಮುಂದುವರಿದಿದರೆ ಮುಂದೊಂದು ದಿನ ನೀರಿಗಾಗಿ ಪರಿತಪಿಸಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಾಚೀನ ಕಾಲದ ಬಾವಿಗಳನ್ನು ಪುನಶ್ಚೇನಗೊಳಿಸಿದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಾಧ್ಯ. | ಡಾ. ಶಶಿಧರ ಹಟ್ಟಿ ಹಿರೇಹಾಳ ಗ್ರಾಮದ ವೈದ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net