

ಬೇತಮಂಗಲ: ಐಪಿಎಲ್ ಗೆದ್ದ ಆರ್ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ನೂಕು ನುಗ್ಗಲು ಉಂಟಾಗಿ ಒಟ್ಟು 11 ಮಂದಿ ಮೃತಪಟ್ಟಿದ್ದು, ಆ ಪೈಕಿ ಕೆಜಿಎ್ ತಾಲೂಕು ಬೇತಮಂಗಲ ಸಮೀಪದ ಬಡಮಾಕನಹಳ್ಳಿಯ ಯುವತಿ ಸಹನಾ (24) ಸಹ ಮೃತಪಟ್ಟಿದ್ದು, ಗುರುವಾರ ಸ್ವಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನದ ಮಧ್ಯೆ ಅಂತ್ಯಕ್ರಿಯೆ ನಡೆಯಿತು.
ಬೆಳಗ್ಗೆ 10ಗಂಟೆ ಸುಮಾರಿಗೆ ಗ್ರಾಮಕ್ಕೆ ಯುವತಿಯ ಮೃತದೇಹ ತರುತ್ತಿದ್ದಂತೆ ಕುಟುಂಬಸ್ಥರು, ಸ್ನೇಹಿತರು ಕಣ್ಣೀರಾದರು. ಪಾಲಕರು ಮತ್ತು ಮೃತಳ ತಂಗಿಯ ರೋಧನೆ ನೋಡಿದ ಗ್ರಾಮಸ್ಥರು ದುರ್ವಿಧಿ ನೆನೆದು ಭಾವುಕರಾದರು.
ಮೃತಳ ತಂದೆ ಸುರೇಶ್ಕುಮಾರ್ ಮತ್ತು ತಾಯಿ ಮಂಜುಳಾ ಇಬ್ಬರೂ ಕೋಲಾರ ತಾಲೂಕಿನಲ್ಲಿ ಸರ್ಕಾರಿ ಶಾಲಾ ಶಿಕರಾಗಿದ್ದು, ಕೋಲಾರದ ಪೇಟೆ ಚಮನಹಳ್ಳಿಯಲ್ಲಿ ವಾಸವಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಪೈಕಿ ಸಹನಾ ಹಿರಿಯ ಮಗಳಾಗಿದ್ದು, ಬಿಇ ಮುಗಿಸಿ ಬೆಂಗಳೂರಿನ ಬಾಷ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಒಬ್ಬಂಟಿಯಾಗಿ ಹೋಗಿ ಸಿಲುಕಿದಳು
ಆರ್ಸಿಬಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಸಹನಾ ಸ್ಟೇಡಿಯಂನ ಪಕ್ಕದಲ್ಲಿರುವ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದರು. ಸ್ಟೇಡಿಯಂಗೆ ನೆಚ್ಚಿನ ತಂಡ ಬರುವುದನ್ನು ಕಣ್ತುಂಬಿಕೊಳ್ಳಲು ಒಂಟಿಯಾಗಿಯೇ ಹೋಗಿದ್ದಳು. ಜನರ ಮಧ್ಯೆ ನಿಂತಿದ್ದಾಗಲೇ ನೂಕು ನುಗ್ಗಲು ಉಂಟಾದಾಗ ಪ್ರಯಾಸದಿಂದ ಹೊರಬಂದಿದ್ದಾಳೆ. ಆದರೆ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದಿದ್ದಾರೆ. ಆಗ ಪಕ್ಕದಲ್ಲೇ ಇರುವವರು ನೀರುಣಿಸಿದರೂ ಮೇಲೇಳದ ಸಹಾನಳನ್ನು ತಕ್ಷಣ ಮಲ್ಯರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟೊತ್ತಿಗೆ ಪ್ರಾಣ ಪ ಹಾರಿ ಹೋಗಿತ್ತು ಎನ್ನಲಾಗಿದೆ.
ಇವತ್ತೇ ಊರಿಗೆ ಬರಬೇಕಿತ್ತು!
ಕಳೆದ 15 ದಿನದ ಹಿಂದೆ ಬಡಮಾಕನಹಳ್ಳಿಗೆ ಬಂದಿದ್ದ ಸಹನಾ, ಗ್ರಾಮದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲಸ್ವಾಮಿ ಮತ್ತು ರೇಣುಕಾ ಯಲ್ಲಮ್ಮನ ದೇವಾಲಯಗಳ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಜೂ. 6ರಿಂದ 8ರವರೆಗೆ ಧಾರ್ಮಿಕ ಕಾರ್ಯಗಳು ಹಮ್ಮಿಕೊಂಡಿದ್ದು, ಜೂ.6ಕ್ಕೆ ಯುವತಿ ಗ್ರಾಮಕ್ಕೆ ಬರುತ್ತೇನೆಂದು ಮನೆಯವರಿಗೆ ತಿಳಿಸಿ, ಹೊಸ ಬಟ್ಟೆಯನ್ನೂ ಖರೀದಿಸಿದ್ದಳು ಎಂದು ಚಿಕ್ಕಪ್ಪ ಬ್ಯಾಟೆಗೌಡ ಕಣ್ಣೀರು ಹಾಕಿದರು.
3 ತಲೆಮಾರಿಗೆ ಮೊದಲ ಹೆಣ್ಣು
ಮೂರು ತಲೆಮಾರುಗಳಿಂದ ಸಹನಾ ಕುಟುಂಬದಲ್ಲಿ ಹೆಣ್ಣು ಮಕ್ಕಳೇ ಇರಲಿಲ್ಲ. ಮುತ್ತಾತ, ತಾತನಿಗೆ ಹೆಣ್ಣು ಮಕ್ಕಳು ಇರಲಿಲ್ಲ. ಸಹನಾ ಹುಟ್ಟಿದಾಗ ಇಡೀ ಕುಟುಂಬಕ್ಕೆ ಬಹಳ ದೊಡ್ಡ ಸಡಗರ ಉಂಟಾಗಿತ್ತು. ಆದ್ದರಿಂದ ಈಕೆಯನ್ನು ಕುಟುಂಬದ ಎಲ್ಲರೂ ಅತ್ಯಂತ ಪ್ರೀತಿಯಿಂದ ಬೆಳೆಸಿದ್ದರು. ಆಕೆ ಪ್ರಬುದ್ಧ ಹುಡುಗಿಯಾಗಿ ಬೆಳೆಯುತ್ತಿದ್ದು, ನಮಗೆಲ್ಲರಿಗೂ ಬುದ್ದಿ ಹೇಳುತ್ತಿದ್ದಳು. ಆದರೆ ಇಂದು ಆಕೆಯೇ ಮಣ್ಣು ಪಾಲಾಗಿದ್ದಾಳೆ ಎಂದು ಸಂಬಂಧಿಕರೊಬ್ಬರು ಮೌನಕ್ಕೆ ಜಾರಿದರು.
ತಹಸೀಲ್ದಾರ್ ಭೇಟಿ, ಸಾಂತ್ವನ
ಜಿಲ್ಲೆ ಮತ್ತು ತಾಲೂಕು ಆಡಳಿತದಿಂದ ಸಾಂತ್ವನ ಹೇಳಲು ಬಂದಿದ್ದ ಕೆಜಿಎ್ ತಹಸೀಲ್ದಾರ್ ನಾಗವೇಣಿ ಪಾಲಕರಿಗೆ ಸಾಂತ್ವನ ಹೇಳಿದರಲ್ಲದೇ, ಸರ್ಕಾರದಿಂದ ಸಿಗುವ ಪರಿಹಾರ ತಲುಪಿಸುತ್ತೇವೆ ಎಂದು ಹೇಳಿದರು. ಸಂಸದ ಮಲ್ಲೆಶ್ಬಾಬು, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಸಂಪಂಗಿ, ಜಿಲ್ಲಾ ಬಿಜೆಪಿ ಅಧ್ಯ ಓಂಶಕ್ತಿ ಚಲಪತಿ, ಬೇತಮಂಗಲ ವೃತ್ತ ಇನ್ಸ್ಪೆಕ್ಟರ್ ರಂಗಸ್ವಾಮಯ್ಶ, ಗುರುರಾಜ ಚಿಂತಾಕಲ ಇತರೆ ಗಣ್ಯರು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸರ್ಕಾರವೇ ಹೊಣೆ
ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವ ಸಂಭ್ರಮದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 12 ಮಂದಿ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.
ನಗರದಲ್ಲಿ ಗುರುವಾರ ಸಹನಾ ಕುಟುಂಬಕ್ಕೆ ಸಂತ್ವನ ತಿಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 18 ವರ್ಷಗಳ ನಂತರ ಆರ್ಸಿಬಿ ತಂಡ ವಿಜಯ ಸಾಧಿಸಿದೆ. ತ್ವರಿತವಾಗಿ ಸಮಾರಂಭ ಆಯೋಜನೆ ಮಾಡುವ ಸಾಧ್ಯತೆಯೇನಿತ್ತು, ಪೂರ್ವ ಯೋಜನೆ ಮಾಡಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು ಎಂದರು.ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ತೊಂದರೆ ಸಂಭವಿಸು ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಕೂಡಲೇ ಎಚ್ಚೆತ್ತುಕೊಂಡಿದ್ದರೆ ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು .ವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದಿದ್ದು ಅಭಿಮಾನಿಗಳಿಗಲ್ಲ ಬದಲಾಗಿ ಮುಖ್ಯಮಂತ್ರಿ, ಸಚಿವರ ಮಕ್ಕಳು, ಮೊಮ್ಮಕ್ಕಳಿಗಾಗಿ ಎಂದು ದೂರಿದರು.