

ಬೂದಿಕೋಟೆ: ಕೃಷಿ ಭಾಗ್ಯ ಸೇರಿ ವಿವಿಧ ಯೋಜನೆಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳಿಗೆ ತಂತಿ ಬೇಲಿ ನಿರ್ಮಿಸದೇ ಕಡೆಗಣಿಸಿರುವುದರಿಂದ ಜನ ಹಾಗೂ ಜಾನುವಾರುಗಳಿಗೆ ಮೃತ್ಯುಕೂಪಗಳಾಗಿ ಮಾರ್ಪಡುತ್ತಿವೆ.
ಜಿಲ್ಲೆಯ ಬಹುತೇಕ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯನ್ನೇ ಅವಲಂಬಿಸಿದ್ದು, ಅದರಿಂದಲೇ ಬದಕು ಕಟ್ಟಿಕೊಂಡಿದ್ದಾರೆ. ಬೇಸಾಯ ಮಾಡುವ ರೈತರಿಗಾಗಿ ನೀರು ಸಂಗ್ರಹಿಸಲು ಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ಹೊಂಡಗಳನ್ನು ನಿರ್ಮಿಸಿ ಅದಕ್ಕೆ ಪಾಲಿಥೀನ್ ಹೊದಿಕೆ ಮಾಡಿಕೊಂಡು ನೀರನ್ನು ಸಂಗ್ರಹಣೆ ಮಾಡಿ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದರೊಟ್ಟಿಗೆ ವಿವಿಧ ಇಲಾಖೆಗಳ ಮೂಲಕ ನರೇಗಾ ಯೋಜನೆಡಿ ಕೃಷಿ ಹೊಂಡಗಳನ್ನು ಸಹ ನಿಮಾರ್ಣ ಮಾಡಲಾಗಿದೆ. ಇದರೊಟ್ಟಿಗೆ ಕೆಲವು ರೈತರು ಸ್ವಯಂ ಪ್ರೇರಿತರಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಫಾಲಿಥೀನ್ ಹೊದಿಕೆ ಅಳವಡಿಸಿದ್ದಾರೆ. ಹೀಗೆ ನಿಮಾರ್ಣ ಮಾಡಿರುವ ಕೃಷಿ ಹೊಂಡದಲ್ಲಿ ಯಾವುದೇ ಅನಾಹುತಗಳು ನಡೆಯುವುದನ್ನು ತಪ್ಪಿಸಲು ಸುತ್ತಲೂ ತಂತಿ ಬೇಲಿ ನಿರ್ಮಿಸುವುದನ್ನು ಇಲಾಖೆಗಳು ಕಡ್ಡಾಯ ಮಾಡಿದೆ. ಕೃಷಿಭಾಗ್ಯ ಯೋಜನೆಯ ಮೂಲಕವೂ ಸಹ ಈಗ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಲು ಶೇ.40 ರಿಂದ 50 ಸಹಾಯ ಧನ ವಿತರಣೆ ಮಾಡುತ್ತಿದೆ.
ಈಜಲು ಹೋಗುವವರು ಬಲಿ
ಬಹುತೇಕ ರೈತರು ತಾವು ತಮ್ಮ ಜಮೀನಿನಲ್ಲಿ ನಿರ್ಮಿಸಿರುವಂತಹ ಕೃಷಿ ಹೊಂಡಗಳಿಗೆ ತಂತಿ ಬೇಲಿಗಳನ್ನು ನಿರ್ಮಿಸದೇ ಇರುವುದರಿಂದ ನೀರು ಕುಡಿಯಲು ಅಥವಾ ಈಜಾಡಲು ಕೃಷಿ ಹೊಂಡದ ಬಳಿ ಹೋಗುವ ಮಕ್ಕಳು ಸೇರಿ ಇತರರು ನೀರಿಗೆ ಬಿದ್ದು ಮೃತಪಡುವ ಘಟನೆಗಳು ಹಲವು ಕಡೆ ನಡೆದಿವೆ. ಈಗ ಬೇಸಿಗೆಯೂ ಆರಂಭವಾಗುತ್ತಿದು,್ದ ಬಿಸಿಲ ತಾಪಕ್ಕೆ ಬಹುತೇಕ ಜನರು ನೀರಿನಲ್ಲಿ ಈಜಾಡುವುದಕ್ಕೆ ಹೋಗುವುದು ಮಾಮೂಲಿ. ಈ ವೇಳೆ ಅನಾಹುತಗಳಾದರೆ ಅದಕ್ಕೆ ಜವಾಬ್ದಾರಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.
ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಮುಗಿದು ರಜೆ ಘೋಷಣೆಯಾಗುತ್ತಿದ್ದಂತೆ ಮನೆಯಲ್ಲಿ ಕಾಲ ಕಳೆಯುವ ಮಕ್ಕಳು ಸಹ ಈಜು ಕಲಿಯಲು ಮುಂದಾಗುತ್ತಾರೆ. ಇಂತಹ ಸಮಯದಲ್ಲಿ ಮಕ್ಕಳು ಕೃಷಿ ಹೊಂಡಗಳಿಗೆ ಇಳಿದರೆ ಅಲ್ಲಿಂದ ಪಾರಾಗುವುದು ಸಾಧ್ಯವಾಗುವುದಿಲ್ಲ. ಈಗಾಗಲೇ ಕೃಷಿ ಹೊಂಡಕ್ಕೆ ಈಜಾಡಲು ಹೋಗಿ ಕೆಲವು ಮಕ್ಕಳು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿದೆ. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸದೇ ರ್ನಿಲಕ್ಷ್ಯ ತೋರಿರುವುದರಿಂದ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಆದ್ದರಿಂದ ರೈತರು ನಿರ್ಮಿಸಿರುವಂತಹ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹಲವು ಕೃಷಿ ಹೊಂಡಗಳನ್ನು ರೈತರು ರಸ್ತೆ ಪಕ್ಕದಲ್ಲಿಯೇ ನಿಮಾರ್ಣ ಮಾಡಿದ್ದಾರೆ. ಆದರೆ ಅದಕ್ಕೆ ತಂತಿ ಬೇಲಿ ನಿರ್ಮಿಸದೇ ಹಾಗೇ ಬಿಟ್ಟಿದ್ದಾರೆ. ಶಾಲಾ&ಕಾಲೇಜುಗಳಿಗೆ ರಜೆ ಘೋಷಣೆಯಾದರೆ ಮಕ್ಕಳು ಹೊಂಡಗಳತ್ತ ಈಜಾಡಲು ಅಥವಾ ಈಜು ಕಲಿಯಲು ಹೋಗುತ್ತಾರೆ. ಇದರಿಂದ ಸಾವು&ನೋವು ಸಂಭವಿಸುವ ಸಾಧ್ಯತೆಯಿದ್ದು, ಮುನ್ನಚ್ಚರಿಕಾ ಕ್ರಮವಾಗಿ ತಂತಿ ಬೇಲಿ ನಿರ್ಮಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸೂಚನೆ ನೀಡಬೇಕು.
- ಭರತ್ ಕುಮಾರ್, ಬೂದಿಕೋಟೆ
ಟಾರ್ಪಲಿನ್ ಹೊದಿಕೆಯೊಂದಿಗೆ ನಿರ್ಮಿಸಿರುವ ಕೃಷಿ ಹೊಂಡಗಳಿಂದ ಕೆಲವು ಕಡೆ ಸಮಸ್ಯೆ ಆಗಿದೆ. ಈಗ ಕೃಷಿ ಹೊಂಡ ನಿಮಾರ್ಣ ಮಾಡುತ್ತಿರುವ ಹೊಂಡಗಳಿಗೆ ತಂತಿ ಬೇಲಿ ನಿರ್ಮಿಸಲು ಸರ್ಕಾರ ಅನುದಾನ ನೀಡುತ್ತಿದೆ. ಆದರೆ ಈ ಹಿಂದೆ ಕೃಷಿ ಭಾಗ್ಯ ಯೋಜನೆಯಡಿ ನಿಮಾರ್ಣ ಮಾಡಿರುವ ಕೃಷಿ ಹೊಂಡಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಅಂತಹ ಕೃಷಿ ಹೊಂಡಗಳಿಗೂ ಸಹ ತಂತಿ ಬೇಲಿ ನಿಮಾರ್ಣ ಮಾಡಲು ಸರ್ಕಾರ ಅನುದಾನ ನೀಡಿದರೆ ಉತ್ತಮ.
- ಮುನಿಯಪ್ಪ, ರೈತ
ಈಗ ಸರ್ಕಾರದಿಂದ ವಿತರಣೆ ಮಾಡುತ್ತಿರುವ ಕೃಷಿ ಹೊಂಡಗಳಿಗೆ ತಂತಿ ಬೇಲಿ ನಿಮಾರ್ಣ ಮಾಡುವುದನ್ನು ಕಡ್ಡಾಯ ಮಾಡಿ ಅನುದಾನ ನೀಡುತ್ತಿದೆ. ಜತೆಗೆ ಕೃಷಿ ಹೊಂಡಕ್ಕೆ ತಂತಿ ಬೇಲಿ ನಿಮಾರ್ಣ ಮಾಡಿದ ನಂತರವಷ್ಟೇ ಪೂರ್ಣ ಪ್ರಮಾಣದ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಈಗಾಗಲೇ ತಂತಿ ಬೇಲಿ ಇಲ್ಲದೆ ಹೊಂಡ ನಿರ್ಮಿಸಿದ ರೈತರಿಗೆ ತಂತಿ ಬೇಲಿ ನಿರ್ಮಿಸಲು ಸೂಚನೆ ನೀಡಲಾಗುತ್ತದೆ.
- ಪ್ರತಿಭಾ, ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ