

ಕುಮಟಾ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ದೊಡ್ಡದಿರುತ್ತದೆ. ಕುಟುಂಬದ ಬಹುಪಾಲು ಜವಾಬ್ದಾರಿ ಹೊರುವ ಜತೆಗೆ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲೂ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಸಾಧನೆಯ ಶಿಖರವನ್ನು ಮಹಿಳೆ ಮುಟ್ಟುತ್ತಿದ್ದಾಳೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಇಲ್ಲಿನ ರೋಟರಿ ಕ್ಲಬ್ ವತಿಯಿಂದ ನಾದಶ್ರೀ ಕಲಾಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಮಾನತೆ ಮತ್ತು ಒಗ್ಗಟ್ಟಿನಿಂದ ಮಹಿಳೆಯರು ಸದಾ ಮುಂಚೂಣಿಯಲ್ಲಿರುವುದು ದೇಶದ ಸಮಗ್ರ ಅಭಿವೃದ್ಧಿಗೆ ಅನುಕೂಲ. ಮಹಿಳೆಯರ ಸಾಧನೆಗೆ ಮನಃಪೂರ್ವಕ ಗೌರವ ಸೂಚಿಸುವ ದಿನ ಇದಾಗಿದ್ದು, ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿಯೂ ಅವಕಾಶ ಕೊಡುವುದು ಮುಂದಿನ ಮಹತ್ತರ ಬೆಳವಣಿಗೆಗೆ ದಾರಿದೀಪವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಂಚನಾ ಭಟ್ ಕುಮಟಾ (ರಾಷ್ಟ್ರೀಯ ಚೆಸ್ ಆಟಗಾರ್ತಿ), ಮರಿಯಾ ಗೊರೆಟ್ಟಿ ಹೊನ್ನಾವರ (ಸಾಮಾಜಿಕ ಸೇವೆ), ಡಾ. ಸವಿತಾ ಕಾಮತ್ ಭಟ್ಕಳ (ನಾಗರೀಕ ಸೇವೆ ಆರೋಗ್ಯಾಧಿಕಾರಿ), ಗೌರಿ ನಾಯ್ಕ ಶಿರಸಿ (ಜಲಗೌರಿ), ನಮಿತಾ ಸಾರಂಗ ಕಾರವಾರ (ಕ್ರೀಡಾ ಸಾಧನೆ ತಜ್ಞೆ), ಜ್ಯೋತಿ ಹೆಗಡೆ ಶಿರಸಿ (ರುದ್ರವೀಣಾ ಪ್ರವೀಣೆ) ಅವರಿಗೆ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೋಟರಿ ವಲಯ ಸಂಯೋಜಕಿ ಜಯಶ್ರೀ ಕಾಮತ್, ಅಸಿಸ್ಟೆಂಟ್ ಗವರ್ನರ್ ಸ್ಟಿಫನ್ ರೋಡ್ರಗೀಸ್, ಡಾ. ಶ್ರೀದೇವಿ ಭಟ್ಟ, ಏನ್ಸ್ ಅಧ್ಯಕ್ಷೆ ಮೇಧಾ ಕಾಮತ್, ಕಾರ್ಯದರ್ಶಿ ಸಂಧ್ಯಾ ಹೆಗಡೆ ಇದ್ದರು.
ರೋಟರಿ ಅಧ್ಯಕ್ಷ ಅತುಲ್ ಕಾಮತ್ ಸಾಧಕರನ್ನು ಪರಿಚಯಿಸಿ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಹೆಗಡೆ ಸಿ.ಎ. ವಂದಿಸಿದರು.