

ಕಾರವಾರ: ಶನಿವಾರ ಮಧ್ಯಾಹ್ನ 12.30 ಕ್ಕೆ ಕಾರವಾರದಲ್ಲಿ ಶೂನ್ಯ ನೆರಳಿನ ದಿನ ಉಂಟಾಯಿತು. ಸೂರ್ಯ ಶಿರೋ ಬಿಂಧುವಿನ ಮೇಲೆ ಹಾದು ಹೋಗುವ ಪರಿಣಾಮ 1 ನಿಮಿಷದ ಅವಽಗೆ ನೆರಳು ಕನಿಷ್ಠ ಪ್ರಮಾಣದಲ್ಲಿ ಗೋಚರಿಸುತ್ತದೆ. ಆದ್ದರಿಂದ ಈ ದಿನವನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ.
ಪ್ರತಿ ಪ್ರದೇಶಕ್ಕೆ ಅನುಗುಣವಾಗಿ ದಿನಾಂಕ ಹಾಗೂ ಸಮಯದಲ್ಲಿ ಇದು ವ್ಯತ್ಯಾಸವಾಗಿ ಕಾಣುತ್ತದೆ. ಈ ವಿದ್ಯಮಾನವನ್ನು ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಾರವಾರದ ಸಾಗರ ಜೀವಶಾಸ್ತç ಅಧ್ಯಯನ ಸಂಸ್ಥೆಯಲ್ಲಿ ವೀಕ್ಷಿಸಲಾಯಿತು.
ಸಾಮಾನ್ಯವಾಗಿ ಹಗಲಿನ ವೇಳೆ ಸೂರ್ಯನ ಬೆಳಕಿನ ಕಾರಣಕ್ಕೆ ನೆರಳು ಉಂಟಾಗುತ್ತದೆ. ಸಾಮಾನ್ಯರು ಊಹಿಸುವಂತೆ ಸೂರ್ಯ ಪ್ರತಿ ದಿನದ ಮಧ್ಯಾಹ್ನ ಶಿರೋಬಿಂದುವಿನ ಮೇಲೆ ಇರುವುದಿಲ್ಲ. ಯಾವುದೇ ಮಧ್ಯಾಹ್ನ ನೆರಳನ್ನು ನೋಡಿ ಇದನ್ನು ಪರಿಶೀಲಿಸಬಹುದು.
ಸೂರ್ಯ ಗರಿಷ್ಠ ಎತ್ತರ ತಲುಪಿದಾಗ ಅದು ಶಿರೋಬಿಂದುವಿನ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುತ್ತದೆ. ಭೂಮಿಯ ಆವರ್ತನೆಯ ಅಕ್ಷ ಅದರ ಕಕ್ಷಾತಲಕ್ಕೆ 23.5 ಡಿಗ್ರಿ ಓರೆಯಾಗಿರುವುದೇ ಇದಕ್ಕೆ ಕಾರಣ. ಋತುಮಾನಗಳಿಗೂ ಇದೇ ಕಾರಣ.
ಇದನ್ನೂ ಓದಿ: ರಸ್ತೆ ಧೂಳಿನ ಗೋಳಿಗೆ ಮುಕ್ತಿ
ಡಿಸೆಂಬರ್ 21ರಂದು ದಕ್ಷಿಣದ ಗರಿಷ್ಠವನ್ನು ತಲುಪಿ ಉತ್ತರಕ್ಕೆ ಹೊರಳುವುದರಿಂದ ಆ ಘಟನೆಗೆ ಉತ್ತರಾಯಣ ಎಂದು ಹೆಸರು. ಆ ಮಧ್ಯಾಹ್ನದ ನೆರಳು ಯಾವುದೇ ಮಧ್ಯಾಹ್ನದ ನೆರಳಿಗೆ ಹೋಲಿಸಿದರೆ ಗರಿಷ್ಠ. ಜೂನ್ 21 ರಂದು ಉತ್ತರದ ಗರಿಷ್ಠ ತಲುಪಿ ದಕ್ಷಿಣಕ್ಕೆ ಹೊರಳುವುದರಿಂದ ಆ ಘಟನೆಗೆ ದಕ್ಷಿಣಾಯನ ಎಂದು ಹೆಸರು.
ಆ ಮಧ್ಯಾಹ್ನದ ನೆರಳು ಕನಿಷ್ಠ. ಸೂರ್ಯನ ಈ ಉತ್ತರ-ದಕ್ಷಿಣ ಚಲನೆಗಳನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದೇ ಕರೆಯುತ್ತಾರೆ. ಕರ್ಕಾಟಕ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ನಡುವೆ ಇರುವ ಸ್ಥಳಗಳಲ್ಲಿ ವರ್ಷದ ಎರಡು ನಿರ್ದಿಷ್ಟ ದಿನಗಳಲ್ಲಿ ಸೂರ್ಯ ಶಿರೋಬಿಂದುವಿನ ಮೇಲೆ ಹಾದು ಹೋಗುವ ಕಾರಣ ಆ ದಿನಗಳಲ್ಲಿ ಮಧ್ಯಾಹ್ನದ ನೆರಳು ಇಲ್ಲದಾಗುತ್ತದೆ. ಇದೇ ಶೂನ್ಯ ನೆರಳಿನ ದಿನದ ತತ್ವ ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಡಾ.ಸಂಜೀವ ದೇಶಪಾಂಡೆ ವಿವರಿಸಿದ್ದಾರೆ.