

ಉಡುಪಿ: ರಾಜ್ಯದಲ್ಲಿ ವಕ್ಪ ಕರಾಳ ಕಾನೂನು ಮೂಲಕ ಮಠ, ಮಂದಿರ, ದೇವಸ್ಥಾನ, ರೈತರ ಭೂಮಿ ವಶಕ್ಕೆ ಪಡೆಯುವ ಕೆಲಸವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷ್ಣ ಮಠ ವಕ್ಪಗೆ ಸೇರಿದ್ದು ಎಂದರೂ ಆಶ್ಚರ್ಯವಿಲ್ಲ. ಕಾವಿಧರಿಸಿದ ಸ್ವಾಮೀಜಿಗಳು ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಹೀಗಾಗಿ ವಕ್ಪ ಕೊನೆಗಾಣಿಸುವವರೆಗೆ ಹೋರಾಟ ನಡೆಯಲಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ವಕ್ಫ್ ಬೋರ್ಡ್ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ "ನಮ್ಮ ಭೂಮಿ ನಮ್ಮ ಹಕ್ಕು" ಅಭಿಯಾನದಡಿ ಜಿಲ್ಲಾಧಿಕಾರಿಗಳ ಕಚೆೇರಿಯ ಬಳಿ ದಿನಪೂರ್ತಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಸಿಎಂ ಸೂಚನೆ ಮೇರೆಗೆ ಸರ್ಕಾರಿ, ರೈತರ ಭೂಮಿ ವಕ್ಫ ಹೆಸರಿಗೆ ದಾಖಲಿಸುವಂತೆ ಸಚಿವ ಜಮೀರ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಧಿಕಾರಿಗಳಿಗೆ ಪರೋಕ್ಷ ಬೆದರಿಕೆ ಹಾಕಿದ್ದಾರೆ. ಈ ಜನವಿರೋಧಿ ಸರ್ಕಾರ ಒಂದು ಕ್ಷಣ ಅಧಿಕಾರಿದಲ್ಲಿ ಮುಂದುವರಿಯಲು ಲಾಯಕ್ಕಿಲ್ಲ. ಸಚಿವ ಜಮೀರ್ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕು ಎಂದರು.
ಬಿಜೆಪಿ ಸರ್ಕಾರ ಅವಧಿಯಲ್ಲೂ ನೋಟೀಸ್ ನೀಡಲಾಗಿದೆ ಎಂಬುದಾಗಿ ಪ್ರಿಯಾಂಕ ರ್ಖಗೆ ಹೇಳುತ್ತಿದ್ದಾರೆ. ನಮ್ಮ ಅವಧಿಯಲ್ಲೂ ವಕ್ಫ ಮಂಡಳಿಯಲ್ಲಿ ಕಾಂಗ್ರೆಸ್ ನೇಮಿಸಿದ ಸದಸ್ಯರೇ ಕಾರ್ಯನಿರ್ವಹಿಸುತ್ತಿದ್ದರು. ವಕ್ಪಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಕ್ಪ ತಿದ್ದುಪಡಿ ಮಸೂದೆ ಜಾರಿಗೊಳಿಸುತ್ತಿದೆ. ಜಂಟಿ ಸಂಸದೀಯ ಸಮಿತಿಯನ್ನೂ ರಚಿಸಿದೆ. ಆದರೆ ಕಾಂಗ್ರೆಸ್ ಸದಸ್ಯರು ಸಭೆ ನಡೆಸಲು ಬಿಡುತ್ತಿಲ್ಲ ಎಂದರು.
ಕಾವಿಧರಿಸಿರುವ ಮಠದ ಸಂನ್ಯಾಸಿಗಳೂ ಹೋರಾಟಕ್ಕೆ ಮುಂದಾಗುತ್ತಿದ್ದಾರೆ. ಜನರಿಗೆ ಗೊತ್ತಿಲ್ಲದೆ ಭೂಮಿ ಮಾಲೀಕತ್ವ ಕಳೆದುಕೊಳ್ಳುತ್ತಿದ್ದಾರೆ. ಆರ್ ಟಿಸಿ 11ನೇ ಕಾಲಂನಲ್ಲಿ ಏಕಾಏಕಿ ವಕ್ಪ ನಮೂದಾಗುತ್ತಿದೆ. ಇದರಿಂದ ಹಿಂದುಗಳ ಬದುಕು ಸರ್ವನಾಶ ಆಗುತ್ತಿದೆ. ಆಶ್ಚರ್ಯವೆಂದರೆ ಕಾಂಗ್ರೆಸ್ನಲ್ಲಿರುವ ಹಿಂದುಗಳೂ ಈ ಬಗ್ಗೆ ಪ್ರಶ್ನಿಸುತ್ತಿಲ್ಲ ಎಂದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಗುರುರಾಜ್ ಗಂಟಿಹೊಳೆ, ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ , ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ಪ್ರಕಾ ಹೆರ್ಗ ದಿನಕರ ಶೆಟ್ಟಿ, ಮುಖಂಡರಾದ ಶಿಲ್ಪಾ ಸುವರ್ಣ, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು. ರೇಶ್ಮಾ ಉದಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದೇಶದಲ್ಲಿ ರಕ್ಷಣಾ ಇಲಾಖೆ, ರೈಲ್ವೇ ಇಲಾಖೆ ಹೊರತುಪಡಿಸಿದರೆ ಅತೀ ಹೆಚ್ಚು ಭೂಮಿ ವಕ್ಪ ಬೋರ್ಡ್ ಅಧೀನದಲ್ಲಿದೆ. ಯಾವ ದೇಶದಲ್ಲೂ ಇಲ್ಲದ ವಿಚಿತ್ರ ಕಾನೂನು ಭಾರತದಲ್ಲಿದ್ದು, ಭೂಕಬಳಿಕೆಗೆ ಕಾಂಗ್ರೆಸ್ ಅನುಮಾಡಿಕೊಟ್ಟಿದೆ. ವಕ್ಪ ಅದಾಲತ್ ನಡೆಸುವ ಬಗ್ಗೆ ಯಾವುದೇ ಕಾನೂನು ಇಲ್ಲ. ರಾಜ್ಯಸರ್ಕಾರದ ಮುಸ್ಲಿಂ ಪರ ವಹಿಸುತ್ತಿರುವ ಧೋರಣೆ ಗಮನಿಸಿದರೆ ಸರ್ಕಾರದ ಆದ್ಯತೆ ಜನಕಲ್ಯಾಣವಲ್ಲ ಎಂಬುದು ಸಾಬೀತಾಗಿದೆ. ವಕ್ಪ ಜಾಗಗಳಿಗೆ ಬೇಲಿ ಹಾಕಲು 350 ಕೋಟಿ ರೂ. ಬಿಡುಗಡೆ ಮಾಡಿದೆ. ಪಹಣಿ ಬದಲಾವಣೆ ಆದೇಶ ಹಿಂಪಡೆದಿರುವುದು ತಾತ್ಕಾಲಿಕ ಕ್ರಮ. ಕಾನೂನಿನಲ್ಲಿ ತಿದ್ದುಪಡಿಯಾಗದೆ ವಕ್ಪ ತೂಗುಗತ್ತಿ ತಪ್ಪಿದ್ದಲ್ಲ. -ಸುನೀಲ್ ಕುಮಾರ್, ಶಾಸಕರು ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನೆಹರೂ ಅವರಿಂದ ಪ್ರಾರಂಭಿಸಿ ಮನಮೋಹನ ಸಿಂಗ್ವರೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದು, ಈ ಪರಿಪಾಠ ಈಗಲೂ ಮುಂದುವರಿಯುತ್ತಿದೆ. ವಕ್ಪ ಬೋರ್ಡ್ ನೋಟೀಸ್ ನೀಡಿದ ಮಾತ್ರಕ್ಕೆ ಜಿಲ್ಲಾಧಿಕಾರಿಗಳು ಜಾಗದ ಮಾಲೀಕತ್ವ ವಕ್ಪಗೆ ವರ್ಗಾಯಿಸಬೇಕು. ಇಂಥ ಕರಾಳ ಕಾನೂನನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷದಲ್ಲಿ ಉಳಿಯಲು ಸಾಧ್ಯವಾಗದೆ ಬಿಜೆಪಿ ಸೇರಿದ್ದು, ಉಳಿದ ಹಿಂದೂ ನಾಯಕರು ಜ್ಞಾನೋದಯವಾಗಿ ಹಿಂದುಗಳ ಪರ ಇರುವ ಏಕೈಕ ಪಕ್ಷ ಬಿಜೆಪಿ ಸೇರಿಕೊಳ್ಳಬೇಕು ಎಂದು ಒತ್ತಾಯಿಸಿದರು. -ಪ್ರಮೋದ್ ಮಧ್ವರಾಜ್, ಮಾಜಿ ಸಚಿವ