ಬ್ರಿಟಿಷ್ ರಾಯಭಾರಿಯಾದ ಹುಬ್ಬಳ್ಳಿ ಯುವತಿ !

sanjana kulkarni 1
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಸಂಜನಾ ಹಿರೇಮಠ ಬೆಂಗಳೂರಿನಲ್ಲಿ ಬುಧವಾರ ಒಂದು ದಿನದ ಮಟ್ಟಿಗೆ ಬ್ರಿಟಿಷ್ ರಾಯಭಾರಿ (ಡೆಪ್ಯುಟಿ ಹೈ ಕಮಿಷನರ್)ಯಾಗಿ ಕಾರ್ಯನಿರ್ವಹಿಸಿದರು.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಭಾರತದಲ್ಲಿನ ಬ್ರಿಟಿಷ್ ರಾಯಭಾರಿ ಕಚೇರಿಯು ‘ಒಂದು ದಿನದ ಮಟ್ಟಿಗೆ ರಾಯಭಾರಿ’ ಎಂಬ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಗೆ 180 ಪ್ರತಿಭಾನ್ವಿತ ಯುವತಿಯರು ಅರ್ಜಿ ಸಲ್ಲಿಸಿದ್ದರು. ಈ ಸ್ಪರ್ಧೆಯಲ್ಲಿ ಸಂಜನಾ ವಿಜೇತರಾಗಿದ್ದರು.

ಬೆಳಗ್ಗೆ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ (ಕರ್ನಾಟಕ ಮತ್ತು ಕೇರಳ) ಚಂದ್ರು ಐಯ್ಯರ್ ಅವರ ನಿವಾಸದಲ್ಲಿ ಉಪಹಾರ ಸೇವಿಸಿದರು. ಬಳಿಕ ಡೆಪ್ಯುಟಿ ಹೈ ಕಮೀಷನರ್ ಕಚೇರಿಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳು ಕುರಿತು ಸಂಜನಾ ಚರ್ಚೆ ನಡೆಸಿದರು. ಮಧ್ಯಾಹ್ನ ಭೋಜನದ ವೇಳೆ ಆಸ್ಟ್ರೇಲಿಯನ್ ಕೌನ್ಸಲ್ ಜನರಲ್ ಹಿಲೇರಿ ಮ್ಯಾಕ್​ಗಿಚಿ ಅವರೊಂದಗೆ ರೊಟ್ಟಿ ಊಟ ಸವಿದರು. ಈ ಸಂದರ್ಭದಲ್ಲಿ ಮಹಿಳಾ ನಾಯಕತ್ವ ಹಾಗೂ ಉತ್ತರ ಕರ್ನಾಟಕದ ತಿನಿಸುಗಳ ಬಗ್ಗೆ ಮಾತನಾಡಿದರು. ಕೊನೆಯಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಷಾ ಮಹಾದೇವನ್ ಅವರೊಂದಿಗೆ ಮಹಿಳೆಯರ ಶಿಕ್ಷಣದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಕಚೇರಿಯಲ್ಲಿ ಒಂದು ದಿನ ಕಳೆದಿದ್ದು ಸ್ಮರಣೀಯವಾದುದು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹಾಗೂ ಒಟ್ಟಾರೆ ನಾಯಕಕತ್ವದ ಬಗ್ಗೆ ಚರ್ಚೆ ನಡೆಸಲು ಹಾಗೂ ಕಲಿಯಲು ಇದೊಂದು ಉತ್ತಮ ಅವಕಾಶವಾಗಿತ್ತು ಎಂದು ಸಂಜನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net