ರಸ್ತೆಯಲ್ಲೇ ವೇದಿಗೆ ದರ್ಬಾರ್​

KLR
Published on

ಕೋಲಾರ; ರಸ್ತೆಯಲ್ಲಿ ಪ್ರತಿಭಟನೆ ಮತ್ತು ರಸ್ತೆ ಬಂದ್​ ಮಾಡಬೇಕಾದರೆ ಅಥವಾ ಒಂದು ಗುಂಪುಗೂಡಬೇಕಾದರೂ ದೇಶದಲ್ಲಿ ಹಲವು ಕಾನೂನುಗಳು ಮತ್ತು ನಿಯಮಗಳು ಅನ್ವಯಿಸುತ್ತವೆ. ಅಲ್ಲದೇ ಆ ರೀತಿ ಮಾಡಲು ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಆದರೆ, ಇತ್ತ ಕೋಲಾರ ನಗರದಲ್ಲಿ ಕಳೆದು ಕೆಲ ದಿನಗಳಿಂದ ಮೇಲಿಂದ ಮೇಲೆ ರಸ್ತೆಯಲ್ಲೇ ವೇದಿಕೆ ನಿರ್ಮಾಣ ಮಾಡಿ ಸಾಂಸತಿಕ, ರಾಜಕೀಯ ಸೇರಿ ಇತರೆ ಕಾರ್ಯಕ್ರಮ ಮಾಡುತ್ತಿರುವುದರಿಂದ ಜನರಿಗೆ ಟ್ರಾಫಿಕ್​ ಕಿರಿಕಿರಿ ಉಂಟಾಗುತ್ತಿದೆ.

ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಕೋಲಾರ ರಸ್ತೆಗಳು ಇನ್ನೂ ಅಗಲೀಕರಣಗೊಂಡಿಲ್ಲ. ನಗರದ ಒಳಭಾಗದಲ್ಲಿರುವ ರಿಂಗ್​ ರೋಡ್​ ಹೊರತುಪಡಿಸಿದರೆ ಯಾವುದೇ ರಸ್ತೆಗಳು ಅಭಿವೃದ್ಧಿಯೂ ಕಂಡಿಲ್ಲ. ಕೆಲವು ದಿನಗಳ ಹಿಂದೆ ಬಂಗಾರಪೇಟೆಯಿಂದ ಕೋಲಾರ ಪ್ರವೇಶ ಮಾಡುವ ರಸ್ತೆ, ಬಂಗಾರಪೇಟೆ ವೃತ್ತ, ಡೂಂಲೈಟ್​ ವೃತ್ತ, ಕ್ಲಾಕ್​ಟವರ್​, ಪ್ರಯಾಣಿಕರ ತಂಗುದಾಣ ವೃತ್ತ, ಮೆಕ್ಕೆ ವೃತ್ತ, ಇಟಿಸಿಎಂ ವೃತ್ತ ಹಾಗೂ ಮೆಕ್ಕೆ ವೃತ್ತದಿಂದ ನ್ಯಾಯಾಂಗ ವೃತ್ತ ಮತ್ತು ಮೆಕ್ಕೆ ವೃತ್ತದಿಂದ ಚಿಕ್ಕಬಳ್ಳಾಪುರ ರಸ್ತೆ ಹಾಗೂ ಕ್ಲಾಕ್​ಟವರ್​ನಿಂದ ಕೋಲಾರ ಪ್ರವೇಶ ಮಾಡುವ ರಾಷ್ಟ್ರೀಯ ಬೈಪಾಸ್​ ರಸ್ತೆಯ ತನಕ ಜೋಡಿ ರಸ್ತೆಗನ್ನಾಗಿ ಮಾಡಲಾಗಿದೆ. ಸದ್ಯಕ್ಕೆ ಈ ರಸ್ತೆಗಳೇ ನಗರದ ರಿಂಗ್​ ರೋಡ್​ ರಸ್ತೆಗಳಾಗಿವೆ. ಇದೇ ರಸ್ತೆಗಳಲ್ಲಿ ಪ್ರತಿಭಟನೆಗಳು, ಸಾಂಸತಿಕ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಡ್ಯೂಂಲೈಟ್​ ವೃತ್ತ, ಬಂಗಾರಪೇಟೆ ವೃತ್ತ, ಎಸ್​ಎನ್​ಆರ್​ ವೃತ್ತ್ತದಲ್ಲಿ ಹಬ್ಬ ಹರಿದಿಗಳಲ್ಲಿ ಹಾಗೂ ರಾಜಕೀಯ ಸಮಾವೇಶಗಳು ಮತ್ತು ಸಾಂಸತಿಕ ಕಾರ್ಯಕ್ರಮಗಳಿಗೆ ವೃತ್ತಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕ್ಲಾಕ್​ಟವರ್​ನಲ್ಲಿ ಮತ್ತೊಂದು ಕೋಮಿನವರು ವೇದಿಕೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಪೊಲೀಸರೇ ಲೀಡರ್​

ರಸ್ತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದಾಗ ಅಲ್ಲಿ ಪೊಲೀಸರನ್ನು ನಿಯೋಜನೆಗೊಳಿಸಿರುತ್ತಾರೆ. ಅಪ್ಪಿತಪ್ಪಿ ಅಲ್ಲಿಗೆ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ವಾಹನಗಳು ಪ್ರವೇಶ ಮಾಡಬೇಕಾಗಿ ಬಂದಲ್ಲಿ ಪೊಲೀಸರಿಗೆ ಕೈಗೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಪರಿಸ್ಥಿತಿ ಬರುತ್ತದೆ. ಆದರೆ ಅದೇ ಜನಪ್ರತಿನಿಧಿಗಳು, ಮುಖಂಡರು, ಸಂಘ&ಸಂಸ್ಥೆಗಳ ಪ್ರತಿನಿಧಿಗಳು ಬಂದರೆ ಸ್ಥಳದಲ್ಲೇ ಲೀಡರ್​ಶಿಪ್​ ಮಾಡುವ ಪೊಲೀಸರು ಆರಾಮದಾಯಕವಾಗಿ ಅವರನ್ನು ಒಳ ಬಿಡುತ್ತಾರೆ. ಅಮಾಯಕ ಸಾರ್ವಜನಿಕರು ಎಲ್ಲ ನಿರ್ಬಂಧ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ವಾಗ್ವಾದ ಮಾಡಿದರೆ ಸಾಮಾನ್ಯರ ಮೇಲೆ ಪೊಲೀಸರ ದಬ್ಬಾಳಿಕೆ ತಪ್ಪಿದ್ದಲ್ಲಾ ಎಂದು ನಾಗರಿಕರು ಅಸಮಾಧಾನ ಹೊರ ಹಾಕಿದ್ದಾರೆ.

ರೋಗಿಗಳ ಪರದಾಟ

ಸಾಂಸತಿಕ ಕಾರ್ಯಕ್ರಮಗಳು ಹಾಗೂ ರಾಜಕೀಯ ಭಾಷಣಕ್ಕೆ ವೇದಿಕೆಗಳನ್ನು ನಿಮಾರ್ಣ ಮಾಡಿದರೆ ಸುಮಾರು 2 ರಿಂದ 3 ಗಂಟೆಗಳ ಕಾಲ ರಸ್ತೆಗಳನ್ನು ಬಂದ್​ ಮಾಡುತ್ತಾರೆ. ಡ್ಯೂಂಲೈಟ್​ ವೃತ್ತ, ಬಂಗಾರಪೇಟೆ ವೃತ್ತ, ಎಸ್​.ಎನ್​.ಆರ್​.ಆಸ್ಪತ್ರೆ ವೃತ್ತದಲ್ಲಿ ಆಸ್ಪತ್ರೆಗಳು ಹೆಚ್ಚಾಗಿರುವುದರಿಂದ ಆಂಬುಲೆನ್ಸ್​ ಸೇರಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡುವಂತಹ ಪರಿಸ್ಥಿತಿ ಉಂಟಾದ ನಿದರ್ಶನಗಳಿವೆ. ರಾಜಕೀಯ ಹಾಗೂ ಸಾಂಸತಿಕ ಕಾರ್ಯಕ್ರಮಗಳಲ್ಲಿ ದೊಡ್ಡಮಟ್ಟದ ಡಿಜೆ ಹಚ್ಚುವುದರಿಂದ ಮಕ್ಕಳಿಗೆ ಮತ್ತು ರೋಗಿಗಳು ಪರದಾಡುವಂತಾಗಿದೆ.

ಕೋಲಾರದಲ್ಲಿ ರಸ್ತೆಗಳೇ ಕಿರಿದಾಗಿದ್ದು, ಇರುವ ರಸ್ತೆಗಳನ್ನು ವಿವಿಧ ಕಾರ್ಯಕ್ರಮಗಳಿಗೆ, ಪ್ರತಿಭಟನೆಗಳಿಗೆ, ರಾಜಕೀಯ ಸಭೆ ಸಮಾರಂಭಗಳಿಗೆ ಬಳಕೆಯಾದರೆ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತದೆ. ನಗರಸಭೆ ಮತ್ತು ಪೊಲೀಸ್​ ಇಲಾಖೆ ಅವಕಾಶ ನೀಡಬಾರದು. ಜಿಲ್ಲಾಡಳಿತ ಇದಕ್ಕಾಗಿ ಒಂದು ಜಾಗ ನಿಗದಿಪಡಿಸಬೇಕು. ರಸ್ತೆಗಳು ಇರುವುದು ಸಾರ್ವಜನಿಕರ ಓಡಾಟಕ್ಕಾಗಿಯೇ ಹೊರತು, ಕಾರ್ಯಕ್ರಮಗಳಿಗಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.

 -ಮುನಿವೆಂಕಟೇಶ್​

ಹಿರಿಯ ನಾಗರಿಕ. ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net