

ಕುಂದಗೋಳ: ಪಟ್ಟಣದ ಲಕ್ಷೆ್ಮೕಶ್ವರ- ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಫುಟ್ಪಾತ್ನ ಕಾಂಕ್ರೀಟ್ ಎಲ್ಲೆಂದರಲ್ಲಿ ಕಿತ್ತು ಕಬ್ಬಿಣ ಸರಳು ಹೊರಗೆ ಕಾಣುತ್ತಿದ್ದು, ಪಾದಾಚಾರಿಗಳು ಅವಘಡದ ಭಯದಲ್ಲೇ ಓಡಾಡುವಂತಾಗಿದೆ.
ಈ ಮಾರ್ಗದಲ್ಲಿ ತಾಲೂಕು ಆಸ್ಪತ್ರೆ, ಪೊಲೀಸ್ ಠಾಣೆ, ಹೆಸ್ಕಾಂ, ಅಬಕಾರಿ ಇಲಾಖೆ ಕಚೇರಿಗಳು, ಶಾಲೆ ಹಾಗೂ ಕಾಲೇಜಗಳಿವೆ. ದಿನನಿತ್ಯ ಸಾರ್ವಜನಿಕರು ತಮ್ಮ ಕೆಲಸ- ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಓಡಾಡುತ್ತಾರೆ.
ರೇವಣಸಿದ್ದೇಶ್ವರ ಬಡಾವಣೆ, ಸಂಗಮೇಶ್ವರ ನಗರ ಸೇರಿ ಅನೇಕ ಬಡಾವಣೆಗಳಿದ್ದು, ಇಲ್ಲಿನ ನಿವಾಸಿಗಳು ಈ ರಸ್ತೆ ಮೂಲಕ ಹೆಚ್ಚು ಓಡಾಡುತ್ತಾರೆ. ಜನರ ಅನುಕೂಲಕ್ಕಾಗಿ ಚರಂಡಿ ಮೇಲೆ ಕಾಂಕ್ರೀಟ್ ಹಾಕಿ ಫುಟ್ಪಾತ್ ನಿರ್ವಿುಸಲಾಗಿದೆ. ಆದರೆ, ಅಲ್ಲಲ್ಲಿ ಕಾಂಕ್ರೀಟ್ ಉದುರಿ ಹೋಗಿದ್ದು, ಕಬ್ಬಿಣ ಸರಳು ಹೊರಗೆ ಕಾಣಿಸುತ್ತಿವೆ. ಹೀಗಾಗಿ, ಜನರು ಫುಟ್ಪಾತ್ ಮೇಲೆ ಸಂಚರಿಸಲು ಭಯಪಡುವಂತಾಗಿದೆ. ಜನರು ನಡೆಯುವ ಯಾವುದೇ ಸಂದರ್ಭದಲ್ಲಿ ಕಾಂಕ್ರೀಟ್ ಪದರು ಉದುರಿ ಬೀಳುವ ಸ್ಥಿತಿಯಲ್ಲಿದೆ.
ಫುಟ್ಪಾತ್ನಲ್ಲಿ ಹೊಸಬರು ಹಾಗೂ ರಾತ್ರಿ ವೇಳೆ ಓಡಾಡುವಾಗ ಅಪಾಯ ತಪ್ಪಿದ್ದಲ್ಲ. ಫುಟ್ಪಾತ್ನ ಸ್ಥಿತಿ ಕಂಡು ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ವಾಹನಗಳ ದಟ್ಟಣೆ ಇರುವ ಕಾರಣ ಅಪಘಾತವಾಗುವ ಸಂಭವ ಇರುತ್ತದೆ.
ಸಂಬಂಧಿಸಿದ ಇಲಾಖೆಯವರು ಇತ್ತ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಫುಟ್ಪಾತ್ನ ಸ್ಥಿತಿ ಕುರಿತು ಸೂಚನಾ ಫಲಕ ಅಳವಡಿಸಬೇಕು. ಅಲ್ಲಲ್ಲಿ ಒಡೆದಿರುವ ಫುಟ್ಪಾತ್ ಸರಿಪಡಿಸಿ ಎಂಬುದು ಸಾರ್ವಜನಿಕ ಒತ್ತಾಯವಾಗಿದೆ.