ಹಿಂದುಳಿದವರಿಗೆ ಕಾಂಗ್ರೆಸ್‌ನಿಂದ ಚೊಂಬು!

raghu koutilya
ರಘು ಕೌಟಿಲ್ಯ, ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ
Published on

ಶಿವಮೊಗ್ಗ: ಸಿದ್ದರಾಮಯ್ಯ ಸರ್ಕಾರ ಹಿಂದುಳಿದವರ ಅಭಿವೃದ್ಧಿಗೆ ಸಂಬಂಧಿಸಿದ ಯಾವ ನಿಗಮಗಳಿಗೂ ನಿಗದಿತ ಪ್ರಮಾಣದಲ್ಲಿ ಅನುದಾನ ನೀಡಲೇ ಇಲ್ಲ. ಅವರು ರಾಜ್ಯದ ಹಿಂದುಳಿದವರಿಗೆ ಕೊಟ್ಟಿದ್ದು ಖಾಲಿ ಚೊಂಬು ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ದೂರಿದರು.

ಹಿಂದುಳಿದ ವರ್ಗದ ಬಡವರು ಕೊಳವೆ ಬಾವಿ ಕೊರೆಯಿಸಲು ಅನುಕೂಲ ಕಲ್ಪಿಸುವ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿಗಳಿಗೆ ಅರಿವು ಸಾಲದ ಯೋಜನೆಗೂ ಹಣ ಇಲ್ಲದಂತಾಗಿದೆ. ಈ ಸರ್ಕಾರ ಹಿಂದುಳಿದವರಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಗಂಭೀರವಾಗಿ ಆರೋಪಿಸಿದರು.
ಬಿಜೆಪಿ ಸರ್ಕಾರವಿದ್ದಾಗ ನಾನು ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದೆ. ಸರ್ಕಾರ ನೀಡಿದ್ದ 200 ಕೋಟಿ ರೂ. ಅನುದಾನವನ್ನು ಸದ್ಬಳಕೆ ಮಾಡಲಾಗಿತ್ತು. ಆದರೆ ಈ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರೂ. ಘೋಷಿಸಿತ್ತು. ಬಿಡುಗಡೆ ಮಾಡಿದ್ದು 50 ಕೋಟಿ ರೂ. ಮಾತ್ರ. ಹಿಂದಿನ ಸರ್ಕಾರ ಕೊಟ್ಟಷ್ಟಾದರೂ ಅನುದಾನ ನೀಡಬೇಕಿತ್ತು. ಆದರೆ ನಿಗಮಗಳಿಗೆ ನಿಗದಿಪಡಿಸಿದ ಅನುದಾನವೂ ದೊರೆಯುತ್ತಿಲ್ಲ ಎಂದು ದೂರಿದರು.
ನಾನು ಮೂರ‌್ನಾಲ್ಕು ದಿನಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಲ್ಲಿನ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬಗ್ಗೆ ಉತ್ತಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಸಂಚಾಲಕ ಆರ್.ಕೆ.ಸಿದ್ದರಾಮಣ್ಣ, ಪ್ರಮುಖರಾದ ಸುಧಾಕರ್, ವಿಕಾಸ್, ಪ್ರದೀಪ್, ಪುರುಷೋತ್ತಮ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net