

ಬಾಗಲಕೋಟೆ: ಸಾಂಸ್ಕೃತಿಕ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಚಿಂತಕ ಡಾ.ಲಕ್ಷ್ಮಣ ಕೊಡಸೆ ಹೇಳಿದರು.
ನಗರದ ಪ್ರಾರ್ಥನಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಕಾ.ತ. ಚಿಕ್ಕಣ್ಣ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಸ್ಕೃತಿಕ, ಸೃಜನಶೀಲ ವ್ಯಕ್ತಿತ್ವ ಹೊಂದಿದವರು ಸಮಾಜದ ಮೇಲಸ್ತರದಲ್ಲಿರುತ್ತಾರೆ. ಪ್ರಚಲಿತ ವಿದ್ಯಮಾನಗಳ ಅರಿವು ಇರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಹಳಷ್ಟು ಪೈಪೋಟಿ ಇದ್ದು, ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಸಾಹಿತ್ಯ, ಸಂಸ್ಕೃತಿಯನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾ.ತ.ಚಿಕ್ಕಣ್ಣರ ಸಾಹಿತ್ಯಾವಲೋಕನ ಮಾಡಿದ ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಸುಮಂಗಲಾ ಮೇಟಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಚಿಕ್ಕಣ್ಣ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ರಚನೆಯಲ್ಲಿ ಗ್ರಾಮೀಣ ಸೊಗಡು, ಸಾಂಸ್ಕೃತಿಕ, ಭಾಷೆ,ಆಚಾರ-ವಿಚಾರ, ಪರಿಸರವನ್ನು ಮರೆತಿಲ್ಲ. ಕನ್ನಡ ಪ್ರೇಮದ ಜತೆಗೆ ಮನುಷ್ಯ ಪ್ರೇಮವನ್ನು ಮೆರೆದಿದ್ದಾರೆ ಎಂದ ಅವರು, ಓದು ವಿಭಿನ್ನ ಆಲೋಚನೆಗಳಿಗೆ ತೆರೆದಿಡುತ್ತದೆ ಎಂದು ತಿಳಿಸಿದರು.
ತಿಂಗಳ ವಿಶೇಷ ಅತಿಥಿ ಹಿರಿಯ ಸಾಹಿತಿ ಕಾ.ತ. ಚಿಕ್ಕಣ್ಣ ಅವರು ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಉಪನ್ಯಾಸಕಿ ಮಹೇಶ್ವರಿ ಹಾಗೂ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಉಪನ್ಯಾಸಕ ದಾವಲ್ ಹುಲ್ಲಿಕೇರಿ ನಿರೂಪಿಸಿದರು. ಜಿಲ್ಲಾ ಕಸಾಪ ಮಾಧ್ಯಮ ಕಾರ್ಯದರ್ಶಿ ಪ್ರಕಾಶ ಗುಳೇದಗುಡ್ಡ ವಂದಿಸಿದರು.