ಶಿವ ನಂಜುಂಡೇಶ್ವರ ಬೆಟ್ಟದಲ್ಲಿ ಭಕ್ತರ ದಂಡು

ಶಿವ ನಂಜುಂಡೇಶ್ವರ ಬೆಟ್ಟದಲ್ಲಿ ಭಕ್ತರ ದಂಡು
Published on

ಆನೇಕಲ್: ಆನೇಕಲ್ ಗಡಿಭಾಗ ಡೆಂಕಣಿಕೋಟೆ ಸಮೀಪದ ಬೇವನತ್ತ ಶಿವ ನಂಜುಂಡೇಶ್ವರ ಬೆಟ್ಟಕ್ಕೆ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದ್ವಾಪರ ಯುಗದಲ್ಲಿ ಪಾಂಡವರು ಈ ದೇವಾಲಯ ನಿರ್ಮಾಣ ಮಾಡಿದ್ದು ಎಂಬ ಐತಿಹ್ಯವಿದ್ದು, ದೇವಾಲಯ ಇದೇ ಕಾರಣ್ಕಕ್ಕೆ ಮಹತ್ವ ಪಡೆದುಕೊಂಡಿದೆ. ಪರ್ವತ ಏರಲು ಇಂದಿಗೂ ಯಾವುದೇ ಮೆಟ್ಟಿಲುಗಳನ್ನು ನಿರ್ಮಿಸಿಲ್ಲ, ಆದರೂ ಆನೇಕಲ್, ಕೋಲಾರ, ತಮಿಳುನಾಡು, ಸೇರಿ ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರು ಇಲ್ಲಿಗೆ ಧಾವಿಸುತ್ತಾರೆ. ಶಿವ ನಂಜುಂಡೇಶ್ವರ ಬೆಟ್ಟಕ್ಕೆ ಹೋಗುವುದರಿಂದ ಕಾಯಿಲೆ ದೂರವಾಗುತ್ತವೆ ಎನ್ನುವ ನಂಬಿಕೆಯಿದೆ. ಈ ಭಾವನೆಯಿಂದ ಭಕ್ತರು ಎತ್ತರದ ಕಲ್ಲಿನ ಬೆಟ್ಟ ಏರಿ 2 ಕಿ.ಮೀ ಮೇಲೆ ಇರುವ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಶಿವರಾತ್ರಿ ಅಂಗವಾಗಿ ಹೊಸೂರು ಡೆಂಕಣಿಕೋಟೆ ಆನೇಕಲ್ ಭಾಗದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಅನ್ನದಾಸೋಹ ಆಯೋಜಿಸಲಾಗಿತ್ತು. ಅಲ್ಲಲ್ಲಿ ಅರವಟ್ಟಿಗೆ ನಿರ್ಮಾಣ ಮಾಡಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ಬೆಟ್ಟದ ಮೇಲೇರಿ ಯಾವುದೇ ತೊಂದರೆಗಳು ಎದುರಾಗದಂತೆ ಶ್ರೀ ಶಿವನಂಜುಂಡೇಶ್ವರನ ದರ್ಶನ ಪಡೆಯಲು ಸ್ಥಳೀಯರು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು ಪೂಜೆ ಸಲ್ಲಿಸಿ ಆರತಿ ಬೆಳಗಿ ಹಿಂತಿರುಗುತ್ತಿದ್ದ ದೃಶ್ಯ ಕಂಡು ಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net