ಚಿಕ್ಕತಿರುಪತಿಯಲ್ಲಿ ಭಕ್ತರ ದಂಡು

shashi web 3
Published on

ಶ್ರಾವಣ 4ನೇ ಶನಿವಾರ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ

ಲಕ್ಕೂರು : ಶ್ರಾವಣ ಮಾಸದ 4ನೇ ಶನಿವಾರ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿ, ಸ್ವಾಮಿಯ ದರ್ಶನ ಪಡೆದರು.

ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವರಿಗೆ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಾರದ್ವಾಜ್​ ಹಾಗೂ ಶ್ರೀಧರ್​ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ದೇವಾಲಯದ ಆವರಣವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿದ್ದು, ಕೊನೆಯ ಶನಿವಾರದ ಅಂಗವಾಗಿ ದೇವಾಲಯದ ಆವರಣದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ಗಾಯನ ಸೇರಿ ಹಲವು ಸಾಂಸತಿಕ, ಮನರಂಜನಾ ಕಾರ್ಯಕ್ರಮ ನಡೆದವು.

ವೆಂಕಟರಮಣಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ತಿರುವಾಭರಣಧಾರಣೆ ಹಾಗೂ ಅಲಂಕಾರ ಗಮನ ಸೆಳೆಯಿತು. ಸಾಂಸತಿಕ ಭವ್ಯ ಪರಂಪರೆಯ ರೂಪದಲ್ಲಿ ಶ್ರಾವಣ ಮಾಸದ ಪೂಜಾ ಕೈಂಕರ್ಯ ವೈಭಯುತವಾಗಿ ನೆರವೇರಿಸಲಾಯಿತು.

ದೇವರಬಿಸನಹಳ್ಳಿ ಬಾಬುರೆಡ್ಡಿ, ಜಗದೇನಹಳ್ಳಿ ಸುಬ್ರಮಣಿರೆಡ್ಡಿ ಅವರು 1 ಲಕ್ಷ ಲಾಡು ವಿತರಿಸಿದರು. ಬಲಜಿಗ ಸಮುದಾಯದಿಂದ ಮಹಿಳೆಯರಿಗೆ ಅರಿಶಿಣ, ಕುಂಕುಮ ಹಾಗೂ ಹಸಿರು ಬಳೆ ವಿತರಿಸಿದರು. ದೇವಾಲಯದ ಹಾಗೂ ಸ್ಥಳಿಯ ದಾನಿಗಳು ಭಕ್ತರಿಗೆ ಕುಡಿಯುವ ನೀರು, ಅನ್ನ ಪ್ರಸಾದದ ವ್ಯವಸ್ಥೆ, ಮುಡಿ ಕೊಡುವ ಭಕ್ತರಿಗೆ ಸ್ನಾನದ ವ್ಯವಸ್ಥೆ, ಶೌಚಗೃಹ, ಸಾರಿಗೆ ಸೌಲಭ್ಯ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಹರೇ ಕೃಷ್ಣ ಹರೇ ರಾಮ ತಂಡದಿಂದ ಹಾಗೂ ಹಲವಾರು ಭಕ್ತ ಮಂಡಳಿಗಳ ವತಿಯಿಂದ ಭಕ್ತಿ ಗೀತೆಗಳ ಪಾರಾಯಣ ನಡೆಯಿತು.

ಭಾಗ್ಯನಗರ(ಬಾಗೆಪಲ್ಲಿ) ಶಾಸಕ ಸುಬ್ಬಾರೆಡ್ಡಿ, ಕೊಲಾರ ಉಪವಿಭಾಗಾಧಿಕಾರಿ ಡಾ.ಮೈತ್ರಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಮಾಜಿ ಶಾಸಕ ಕೆ.ಎಸ್​.ಮಂಜುನಾಥಗೌಡ, ಮಾಜಿ ಸಂಸದ ಎಸ್​.ಮುನಿಸ್ವಾಮಿ, ಜೆಡಿಎಸ್​ ಮುಖಂಡ ಜಿ.ಇ.ರಾಮೇಗೌಡ, ಮುಖಂಡರಾದ ಅಗ್ರಿ ನಾರಾಯಣಪ್ಪ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಟಿ.ಆರ್​.ವೆಂಕಟೇಶ್​ಗೌಡ, ವ್ಯ್ವವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀನಿವಾಸಯ್ಯ, ಶ್ರೀನಿವಾಸನ್​, ಕೃಷ್ಣಮೂರ್ತಿ, ಗೋಪಾಲ್​, ಭಾಗ್ಯಮ್ಮ, ತೇಜಸ್ವಿನಿ, ಇಒ ಟಿ.ಸೆಲ್ವಮಣಿ, ಪೆಷ್ಕಾರ್​ ಚಲುವಸ್ವಾಮಿ, ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಪಂ ಪಿಡಿಒ ಸೇರಿ ಹಲವು ಗಣ್ಯರು ದೇವರ ದರ್ಶನ ಪಡೆದರು

100 ಟಿಕೆಟ್​ ವ್ಯವಸ್ಥೆ : ರಾಜ್ಯದ ಹಲವು ಭಾಗಗಳು ಸೇರಿ ಪಕ್ಕದ ತಮಿಳುನಾಡು, ಆಂಧ್ರಪ್ರದೇಶ ಇನ್ನಿತರ ರಾಜ್ಯಗಳಿಂದ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ದರ್ಶನ ಪಡೆಯುಲು ಅನುಕೂಲ ಮಾಡಿಕೊಡಲಾಗಿತ್ತು. ಧರ್ಮದರ್ಶನದ ಸರತಿ ಸಾಲು 1 ಕಿಮೀ ನಿರ್ಮಿಸಿದ್ದು, ಮುಜರಾಯಿ ಇಲಾಖೆಯಿಂದ ವಿಶೇಷ ದರ್ಶನಕ್ಕೆ 100 ರೂ.ಗಳ ಟಿಕೆಟ್​ ನಿಗದಿಪಡಿಸಿ ಉಚಿತ ಲಾಡು ವಿತರಿಸಲಾಯಿತು. ಭಕ್ತರಿಗೆ ಮೊಬೈಲ್​ ಟಾಯಲೆಟ್​, ಕ್ಯೂನಲ್ಲಿ ಫ್ಯಾನ್​​​​​​​​​​ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಹಾಗೂ ಅಂಗವಿಕಲರಿಗೆ ವಿಶೇಷ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net