

ಸುಳ್ಯ(ದಕ್ಷಿಣ ಕನ್ನಡ): ಹಕ್ಕಿಯ ಗೂಡುಗಳನ್ನ ಕಂಡಾಕ್ಷಣ ಮನದಲ್ಲೇ ಖುಷಿ, ಪದೇಪದೆ ನಮ್ಮ ಕಣ್ಣುಗಳು ಅದರತ್ತಲೇ ದಿಟ್ಟಿಸುತ್ತಿರುತ್ತವೆ. ಅಷ್ಟು ಚೆಂದವಾಗಿರುತ್ತೆ ಹಕ್ಕಿ ಗೂಡು. ಪ್ರತಿ ಪಕ್ಷಿಯೂ ಅತ್ಯಂತ ಜಾಣ್ಮೆಯಿಂದ ವಿಭಿನ್ನವಾಗಿ ಗೂಡು ಕಟ್ಟುತ್ತದೆ. ಇದು ನಮಗೆ ಸೋಜಿಗ ಕೂಡ. ಇದೀಗ ಕಾಗೆಯೊಂದು ಕಬ್ಬಿಣದ ತಂತಿಗಳಿಂದಲೇ ಗೂಡು ಕಟ್ಟಿದ್ದು, ಆಶ್ಚರ್ಯ ಹುಟ್ಟಿಸಿದೆ.
ಸಾಮಾನ್ಯವಾಗಿ ಕಾಗೆಗಳು ಕಸ-ಕಡ್ಡಿಗಳಿಂದ ಗೂಡು ನಿರ್ಮಿಸುತ್ತವೆ. ಆದರೆ ಸುಳ್ಯದಲ್ಲಿ ಕಾಗೆಯೊಂದು ಸುಮಾರು ಎರಡು ಕೆಜಿ ತೂಕದಷ್ಟು ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಎರಡು ಗೂಡುಗಳನ್ನು ನಿರ್ಮಿಸಿದೆ. ಸೆಂಟ್ರಿಂಗ್ ಕಾಮಗಾರಿಗೆ ಬಳಸುವ ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಚೊಕ್ಕಾಡಿಯ ಭಗವಾನ್ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದ ಮರದಲ್ಲಿ ಕಾಗೆ ಗೂಡನ್ನು ಕಟ್ಟಿದೆ. ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಗೆದ್ದಲ್ಲನ್ನು ಇತ್ತೀಚೆಗೆ ತೆರವುಗೊಳಿಸಲು ಮುಂದಾದಾಗ ಕೊಂಬೆಯಲ್ಲಿ ಈ ರೀತಿಯ ಎರಡು ಗೂಡುಗಳು ಕಂಡುಬಂದಿವೆ. ಒಂದರಲ್ಲಿ ಕಾಗೆ ವಾಸವಿದ್ದು, ಮತ್ತೊಂದರಲ್ಲಿ ವಾಸವಿರಲಿಲ್ಲ.
ಮರದ ಕಡ್ಡಿಗಳ ಅಲಭ್ಯತೆಯ ಕಾರಣ ಮತ್ತು ಪದೇಪದೆ ಹಾಳಾಗುವ ಕಸ ಕಡ್ಡಿಯ ಗೂಡಿನ ಬದಲು ದೀರ್ಘ ಬಾಳಿಕೆಯ ಕಬ್ಬಿಣದ ತಂತಿಯ ಗೂಡು ನಿರ್ಮಾಣಕ್ಕೆ ಜಗತ್ತಿನ ಬುದ್ಧಿವಂತ ಪಕ್ಷಿ ಎಂದೇ ಹೆಸರಾಗಿರುವ ಕಾಗೆ ಮಾರು ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಈಗ ವಾಸವಿಲ್ಲದ ಕಾಗೆ ಗೂಡನ್ನು ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಇನ್ನು ಆಧುನಿಕತೆಯಿಂದ ಕಾಡುಗಳನ್ನು ನಾಶ ಮಾಡುತ್ತಿರುವ ಮಾನವನನ್ನು ಕಾಗೆ ಎಚ್ಚರಿಸುತ್ತಿದೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.