

ಸಿಂಧನೂರು: ತಾಲೂಕಿನಲ್ಲಿ ಅಧಿಕ ಮಳೆಯಿಂದ ತೊಗರಿ ಬೆಳೆ ಒಣಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ.
ತುರ್ವಿಹಾಳ ಹೋಬಳಿ ಸೇರಿ ವಿವಿಧೆಡೆ ನೂರಾರು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ ರೈತರು ಅತಿವೃಷ್ಟಿಯಿಂದ ಸಂಕಷ್ಟದಲ್ಲಿದ್ದಾರೆ. ಅಧಿಕ ತೇವಾಂಶದಿಂದ ತೊಗರಿ ಬೆಳೆ ಬೇರು ಕೊಳೆತು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿದೆ. ತಗ್ಗು ಪ್ರದೇಶದ ಹೊಲಗಳಲ್ಲಿ ಇತರ ಬೆಳೆಗಳು ಮಳೆಗೆ ನಾಶವಾಗಿವೆ. ಹೊಲಗಳಲ್ಲಿ ಮಳೆ ನೀರು ನಿಂತಿವೆ. ಕೆಲವರು ಯೂರಿಯಾ ಗೊಬ್ಬರ ಹಾಕಿದರೂ ಪ್ರಯೋಜನವಾಗುತ್ತಿಲ್ಲ. ಮುಂಗಾರು ಪೂರ್ವ ಮಳೆ ಹೆಚ್ಚಾಗಿದೆ. ಮುಂಗಾರು ಮಳೆ ಸರಾಸರಿಗಿಂತಲೂ ಕಡಿಮೆಯಾಗಿದ್ದು, ಒಂದೇ ವಾರ ನಿರಂತರ ಸುರಿದ ವರ್ಷಧಾರೆಗೆ ರೈತರು ಬಸವಳಿದಿದ್ದಾರೆ. ಈಗ ಮಳೆ ಕಡಿಮೆಯಾಗಿದೆ. ಆದರೆ, ತೇವಾಂಶ ಹೆಚ್ಚಳದಿಂದ ಬೆಳೆ ನಾಶವಾಗಿದೆ.