

ಹೊಸಕೋಟೆ: ಗ್ಯಾರಂಟಿ ಯೋಜನೆಗಳಿಂದ ಯಾವುದೇ ಆರ್ಥಿಕ ಬಿಕ್ಕಟ್ಟು ಎದುರಾಗಿಲ್ಲ. ಆದರೆ ಹಿಂದಿನ ಸರ್ಕಾರಗಳಲ್ಲಿ ಮಾಡಿದ ಅರ್ಥಿಕ ಅಶಿಸ್ತಿನ ಪರಿಣಾಮವಾಗಿ ಇಲಾಖೆಗಳಿಗೆ ಅನುದಾನ ಒದಗಿಸಿ ಹಂಚಿಕೆ ಮಾಡುವಲ್ಲಿ ವಿಳಂಬವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಅನುಗೊಂಡನಹಳ್ಳಿ ಹೋಬಳಿಯಲ್ಲಿ ಒಟ್ಟು 1.50ಕೋಟಿ ರೂಪಾಯಿ ವೆಚ್ಚದಲ್ಲಿ ದೇವಲಾಪುರ, ಡಿ.ಹೊಸಹಳ್ಳಿ, ಮೇಡಿ ಮಲ್ಲಸಂದ, ಮಠ ಮಲ್ಲಸಂದ್ರ, ಅನುಗೊಂಡನಹಳ್ಳಿ, ನಾಗನಾಯಕನಕೋಟೆ, ತಿರುಮಲ ಶೆಟ್ಟಿ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ತಾಲೂಕಿನಲ್ಲಿ ಅನೇಕ ಕಡೆ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯ ಮಾಡಲಾಗುತ್ತಿದೆ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ತಾಲೂಕಿಗೆ ವಿಶೇಷ ಅನುದಾನದ ಜೊತೆಗೆ ನೀರಾವರಿ ಯೋಜನೆ ಪೂರ್ಣಗೊಳಿಸಲು ಮನವಿ ಮಾಡಲಾಗಿದೆ ಎಂದರು.
ಗೃಹಲಕ್ಷಿ ್ಮಹಣ ಶೀಘ್ರದಲ್ಲೇ ಜಮೆ
ಕಾಂಗ್ರೆಸ್ ಜಾರಿ ಮಾಡಿದ ಐದು ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಕೆಲವು ಬದಲಾವಣೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿಯೋಜನೆಗೆ ಹಣ ಜಮಾ ಮಾಡುವ ಪ್ರಕ್ರಿಯೆ ವಿಳಂಬವಾಗಿದೆ. ಮಾರ್ಚ್ ವೇಳೆಗೆ ಎಲ್ಲ ಬಾಕಿ ಹಣ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಗೀತಾ ಪ್ರಕಾಶ್, ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜು, ಗುತ್ತಿಗೆದಾರ ಬ್ಯಾಟೆಗೌಡ, ಮುಖಂಡರಾದ ಶೇಷಪ್ಪ, ತತ್ತನೂರು ಮಂಜುನಾಥ್ ಇದ್ದರು.