ಮಂಗಳೂರು: ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ನ ಆಡಳಿತ ವೈಖರಿ ಬಗ್ಗೆ ಕೆಲವರು ಆಧಾರರಹಿತ ಆರೋಪ ಮಾಡುತ್ತಿದ್ದು, ಇದರ ವಿರುದ್ದ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಕಸಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿದರು.
ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲಕಾಲಕ್ಕೆ ಆಡಳಿತ ಚುರುಕು ಆಗಲು ಹೊಸ ಕಾನೂನಿನ ಅಳವಡಿಕೆಗಾಗಿ ನಮ್ಮಲ್ಲಿರುವ ನಿಬಂಧನೆಗಳನ್ನು ಬದಲಾವಣೆ ನಿಬಂಧನೆಗಳ ಅಡಿಯಲ್ಲಿಯೇ ತಿದ್ದುಪಡಿ ಮಾಡುವ ಅವಕಾಶ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ. ನಾವು ಈವರೆಗೆ ಮಾಡಲಾದ ಎಲ್ಲಾ ತಿದ್ದುಪಡಿ ಯಾವುದೂ ಕೂಡ ಕಾನೂನು ಬಾಹಿರ ಅಲ್ಲ. ಆರೋಪಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಬಂದರೆ ದಾಖಲೆ ಸಹಿತ ಚರ್ಚೆಗೆ ಬರಲು ನಾವು ಸಿದ್ದ. ಪ್ರಸ್ತುತ ಕಸಪದ ಕಾರ್ಯಚಟುವಟಿಕೆಗಳ ಬಗ್ಗೆ ಕನ್ನಡಿಗರಿಂದ ಉತ್ತಮ ಪ್ರಶಂಶೆ ಹಾಗೂ ಬೆಂಬಲ ವ್ಯಕ್ತವಾಗುತ್ತಿದ್ದು, ಇದನ್ನು ಸಹಿಸದ ವಿಘ್ನ ಸಂತೋಷಿಗಳಿಂದ ರಾಜ್ಯ ಸರ್ಕಾರಕ್ಕೆ ಆಧಾರ ರಹಿತ ದೂರು ಮನವಿ ನೀಡಲಾಗಿರುವ ಬಗ್ಗೆ ಮಾಹಿತಿ ಇದೆ. ಕಸಪದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಹಾಗೂ ಕಸಪ ಆಡಳಿತಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕಗೊಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೆಲವರು ಮನವಿ ಸಲ್ಲಿಸಿದ್ದಾರೆ. ಆಧಾರ ರಹಿತ ಮನವಿ, ದೂರುಗಳನ್ನೂ ಸರ್ಕಾರ ಪುರಸ್ಕರಿಸುವುದಿಲ್ಲ ಎಂಬ ನಂಬಿಕೆಯೂ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾಗಳಲ್ಲಿ ಕಾನೂನು ಬದ್ಧವಾಗಿಯೇ ಕೆಲವು ತಿದ್ದುಪಡಿಗಳನ್ನು ಮಾಡಲಾಗುತ್ತಿದೆ, ಕಸಾಪ ಬೈಲಾ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡಲಾಗುತ್ತಿಲ್ಲ, ಈ ಹಿಂದೆಯೂ ಮಾಡಲಾಗಿದೆ. ಚುನಾವಣೆಯಲ್ಲಿ ಎರಡು ಬಾರಿ ಗೆದ್ದವರು ಹೊಸಬರಿಗೆ ಅವಕಾಶ ಕಲ್ಪಿಸುವುದು, ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು, ಸತತ 3 ಬಾರಿ ಕಾರ್ಯಕಾರಿ ಸಭೆಗಳಿಗೆ ಗೈರಾದವರ ಸದಸ್ಯತ್ವ ರದ್ದು ಮಾಡುವುದು ಸೇರಿದಂತೆ ವಿವಿಧ ಬದಲಾವಣೆಗಳನ್ನು ಮಾಡಲಾಗುವುದು. ಕಸಾಪ. ಚುನಾವಣೆಯಲ್ಲಿ ಸೋತವರು ಸೇಡು ತೀರಿಸಿಕೊಳ್ಳಲು ತಿದ್ದುಪಡಿಯನ್ನು ವಿರೋಧಿಸುತ್ತಿದ್ದಾರೆ. ನನ್ನನ್ನು ಸರ್ವಾಧಿಕಾರಿ ಎನ್ನುತ್ತಿದ್ದಾರೆ ಎಂದರು.
ಕಸಪ ಕಾರ್ಯಚಟುವಟಿಕೆ ಹಾಗೂ ಆಡಳಿತದ ವಿರುದ್ದ ಸರ್ಕಾರ ಈವರೆಗೆ ಯಾವುದೇ ಹಸ್ತಾಕ್ಷೇಪ ಮಾಡಿಲ್ಲ, ವೈಯಕ್ತಿಕ ಹಿತಾಸಕ್ತಿಯಿಂದ ಕೆಲವರು ಕಸಪ ವಿರುದ್ದ ಆಧಾರರಹಿತ ಆರೋಪ ಮಾಡುತ್ತಿದ್ದು, ಇದರ ವಿರುದ್ದ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನು ಕಸಪ ನೀಡಿದೆ ಎಂದು ಕಸಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ತಿಳಿಸಿದರು.
ಕಸಪ ದ.ಕ ಜಿಲ್ಲಾಧ್ಯಕ್ಷ ಡಾ.ಎಂಪಿ ಶ್ರೀನಾಥ್, ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮಾಧವ್ ಎಂಕೆ, ಪ್ರಮುಖರಾದ ಉಮೇಶ್ ನಾಯಕ್ ಪುತ್ತೂರು, ಯಧುಪತಿ ಗೌಡ, ಮಿಥುನ್ ಉಡುಪ, ಹರೀಶ್ ಬಂಟ್ವಾಳ್ ಮತ್ತಿತರರು ಇದ್ದರು.