

ಪರಶುರಾಮ ಭಾಸಗಿ ವಿಜಯಪುರ
ನಕಲಿ ದಾಖಲೆ ಸೃಷ್ಠಿಸಿ ಅಥವಾ ಕಾನೂನಿನಡಿ ನಿಷೇಧಿಸಲಾದ ದಾಖಲೆಗಳ ಆಧಾರದ ಮೇಲೆ ಆಸ್ತಿ ವಹಿವಾಟು ಅಧಿಕೃತಗೊಳಿಸುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ಭ್ರಷ್ಟ ಉಪ ನೋಂದಣಾಧಿಕಾರಿಗಳಿಗೆ ನಡುಕ ಶುರುವಾಗಿದೆ. ದಾಖಲೆಗಳ ನೈಜತೆ ಅಥವಾ ದಸ್ತಾವೇಜು ಪರಿಶೀಲಿಸುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗೆ ಇಲ್ಲವೆಂಬ ಕರ್ನಾಟಕ ನೋಂದಣಿ ನಿಯಮಾವಳಿ (1965ರ ನಿಯಮ 73)ಯನ್ನೇ ಬಂಡವಾಳ ಮಾಡಿಕೊಂಡಿದ್ದ ಹಲವು ಅಧಿಕಾರಿಗಳು ಹಾಗೂ ದಲ್ಲಾಳಿ ವರ್ಗಕ್ಕೆ ನೂತನ ಕಾಯ್ದೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಹೀಗಾಗಿ ಹೇಗಾದರೂ ಮಾಡಿ ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಲು ತಂತ್ರಗಾರಿಕೆ ಹೆಣೆಯುತ್ತಿರುವುದು ಕಂಡು ಬಂದಿದೆ. ಇನ್ನೊಂದೆಡೆ ನೊಂದ ಜೀವಗಳು ಕಾಯ್ದೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸುತ್ತಿವೆ. ಆದರೆ, ರಾಷ್ಟ್ರಪತಿಗಳಿಂದ ಅಂಕಿತ ಬಿದ್ದ ವಿಧೇಯಕ ಇನ್ಮುಂದಿನ ಪ್ರಕರಣಗಳಿಗೆ ಮಾತ್ರ ಅನ್ವಯಿಸಲಿದೆಯಾ ಅಥವಾ ಈ ಹಿಂದೆ ನಡೆದ ಅಕ್ರಮಗಳಿಗೂ ಅನ್ವಯಿಸಲಿದೆಯಾ? ಎಂಬ ಗೊಂದಲ ಸಾರ್ವಜನಿಕರನ್ನು ಕಾಡುತ್ತಿದೆ.
ಈ ಹಿಂದೆ ಚಾಲ್ತಿಯಲ್ಲಿದ್ದ ಕರ್ನಾಟಕ ನೋಂದಣಿ ನಿಯಮಾವಳಿ (1965ರ ನಿಯಮ 73)ಯಡಿ ನಕಲಿ ದಾಖಲೆ ಸೃಷ್ಠಿಸಿ ಆಸ್ತಿ ನೋಂದಾಯಿಸಿ ಮಾರಾಟ ಮಾಡುವ ದಂಧೆಯಡಿ ಅಧಿಕಾರಿಯನ್ನು ಹೊಣೆಯಾಗಿಸಲು ಅವಕಾಶ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಅಧಿಕಾರಿಗಳು ದಲ್ಲಾಳಿಗಳ ಸಹಾಯದಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಆಸ್ತಿ ನೋಂದಾಯಿಸಿ ಮಾರಾಟ ಮಾಡುತ್ತಿದ್ದರು. ಖಾಲಿ ನಿವೇಶನ, ವಾರಸುದಾರರು ಇಲ್ಲದಿರುವುದು, ವೃದ್ಧರು, ವಿಧವೆಯರು ಮತ್ತಿತರ ಅಮಾಯಕರ ಜಮೀನುಗಳನ್ನು ಸದ್ದಿಲ್ಲದೇ ಒಬ್ಬರಿಂದ ಇನ್ನೊಬ್ಬರು, ಅವರಿಂದ ಮತ್ತೊಬ್ಬರ ಹೆಸರಿಗೆ ಮಾರಾಟಗೊಳ್ಳುತ್ತಲೇ ಇದ್ದವು. ಭೂಮಿ ಕಳೆದುಕೊಂಡವರು ದೂರು ನೀಡಲು ಮುಂದಾಗುತ್ತಿದ್ದಂತೆ ದಂಧೆಕೋರರು ರಾಜಿ-ಸಂಧಾನ ಸೂತ್ರ ಬಳಸಿ ಹಣ ಪೀಕಲು ಮುಂದಾಗುತ್ತಿದ್ದರು. ಅದಕ್ಕೂ ಜಗ್ಗದೇ ಎಫ್‌ಐಆರ್ ದಾಖಲಿಸಿದರೆ ಉಪ ನೋಂದಣಾಧಿಕಾರಿಗಳು ಸರ್ಕಾರದ ಈ ನಿಯಮಾವಳಿ ಬಳಸಿ ಬಚಾವಾಗುತ್ತಿದ್ದಾರೆ.
ಆದರೆ, ಇದೀಗ ಸರ್ಕಾರ ಕರ್ನಾಟಕ ನೋಂದಣಿ ನಿಯಮಾವಳಿ (1965ರ ನಿಯಮ 73)ಗೆ ತಿದ್ದುಪಡಿ ತಂದು ದಾಖಲೆಗಳ ನೈಜತೆ ಪರಿಶೀಲಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಹಾಗೊಂದು ವೇಳೆ ಖೊಟ್ಟಿ ದಾಖಲೆ ಆಧರಿಸಿ ನೋಂದಣಿ ಮಾಡಿದ್ದೇ ಆದಲ್ಲಿ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು ಎಂಬ ಮಸೂದೆ ಮಂಡಿಸಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿತ್ತು. ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ಅಧಿಕಾರಿಗಳ ಹೊಸ ವರಸೆ ಆರಂಭಿಸಿದ್ದು, ಸಬೂಬು ಹೇಳುತ್ತಾ, ವಿಳಂಬ ಮಾಡುತ್ತಾ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ.
ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುವ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಹಲವಾರು ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ, ಸಾಕಷ್ಟು ನಿಯಮ ರೂಪಿಸಿದರೂ ಅವುಗಳ ಪಾಲನೆಯಾಗುತ್ತಿರಲಿಲ್ಲ. ದಸ್ತಾವೇಜು ನೋಂದಣಿ ಸಮಯದಲ್ಲಿ ಪಕ್ಷಕಾರರ ಆಧಾರ್ ಸಂಖ್ಯೆ ಪರಿಶೀಲಿಸಲು ಮತ್ತು ಪಹಣಿಗೆ ಆಧಾರ್ ಜೋಡಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ಅಲ್ಲದೇ, ನೋಂದಣಿ ಕಾಯ್ದೆ 1908 ರ ಕಲಂ 34ರಡಿ ವಿಚಾರಣೆ ಮಾಡಲು ಉಪ ನೋಂದಣಾಧಿಕಾರಿಗೆ ಅಧಿಕಾರವಿದೆ. ಕಾವೇರಿ 2.0 ತಂತ್ರಾಂಶ ಕೂಡ ಅಭಿವೃದ್ಧಿ ಪಡಿಸಲಾಗಿದೆ. ಆದರೂ, ಅಕ್ರಮ ತಡೆಯಲಾಗುತ್ತಿಲ್ಲವೆಂದರೆ ಇದರಲ್ಲಿ ಅಧಿಕಾರಿಗಳ ಕೈವಾಡವಿಲ್ಲವೆಂದು ನಂಬುವುದಾದರೂ ಹೇಗೆ? ಎಂಬ ಅನುಮಾನವೇ ನೂತನ ವಿಧೇಯಕ ಜಾರಿಗೆ ಕಾರಣ.
ಯಾರದ್ದೋ ಆಸ್ತಿ ಯಾರದ್ದೋ ಪಾಲಾದರೆ ನಮಗೇನು? ಎಂಬ ಭಂಡ ಅಧಿಕಾರಿಗಳಿಗೆ ಇದೀಗ ನೂತನ ಮಸೂದೆಯಿಂದ ಎಲ್ಲ ದಾಖಲೆ ಪರಿಶೀಲಿಸಿಯೇ ನೋಂದಣಿ ಮಾಡುವ ಅನಿವಾರ್ಯತೆ ಎದುರಾಗಿದೆ. ಸರ್ಕಾರದ ಈ ಕ್ರಮದಿಂದ ಕೆಲ ಕಾಲ ತೊಂದರೆಯಾಗಬಹುದಾದರೂ ಸಾರ್ವಜನಿಕರ ಹಿತದೃಷ್ಠಿಯಿಂದ ಈ ಮಸೂದೆ ತುಂಬ ಸಹಕಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಳೆದ ಮೂರು ವರ್ಷಗಳ ಕಾಲಾವಧಿಯಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸಿದ 86 ಪ್ರಕರಣಗಳು ಕಂಡು ಬಂದಿವೆ. 2 ಪ್ರಕರಣಗಳಲ್ಲಿ 7 ಹಿರಿಯ ಹಾಗೂ ಉಪ ನೋಂದಣಾಧಿಕಾರಿಗಳು ಶಾಮೀಲಾಗಿದ್ದು, ಇಲಾಖೆ ವಿಚಾರಣೆ ಪ್ರಗತಿಯಲ್ಲಿದೆ. ಆದರೆ, ಈ ಅಂಕಿ ಅಂಶಗಳ ಹೊರತಾಗಿಯೂ ವಿಜಯಪುರವೊಂದರಲ್ಲಿಯೇ ಅಂದಾಜು 100ಪ್ರಕರಣಗಳು ಕಂಡು ಬಂದಿವೆ.
ಗೃಹ ಸಚಿವ ಜಿ. ಪರಮೇಶ್ವರ ನೀಡುವ ಮಾಹಿತಿ ಪ್ರಕಾರ ಕಳೆದ 2 ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸಿರುವ 19 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 9 ಪ್ರಕರಣಗಳು ದಾಖಲಾಗಿದ್ದು, 22 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 10 ಪ್ರಕರಣ ದಾಖಲಾಗಿದ್ದು, 13 ಆರೋಪಿಗಳನ್ನು ಬಂಧಿಸಲಾಗಿದೆ. ಕಂದಾಯ ಸಚಿವ ಬೈರೇಗೌಡರು ನೀಡಿದ ಮಾಹಿತಿ ಪ್ರಕಾರ, ವಿಜಯಪುರ ಜಿಲ್ಲೆಯ ಒಟ್ಟು ಐದು ಉಪ ನೋಂದಣಿ ಕಚೇರಿಗಳ ಪೈಕಿ ವಿಜಯಪುರ ಮತ್ತು ಇಂಡಿ ಉಪ ನೋಂದಣಿ ಕಚೇರಿಯಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಎರಡು ದಸ್ತಾವೇಜು (ದಸ್ತಾವೇಜುಗಳ ಸಂಖ್ಯೆ -4546/24-25 ಮತ್ತು 19503/23-24 ) ಗಳು ನೋಂದಣಿಯಾಗಿವೆ. ಸಚಿವರಿಬ್ಬರ ಮಾಹಿತಿ ಗೊಂದಲವಿದ್ದು, ಇದಕ್ಕೂ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ನೂತನ ಮಸೂದೆಗೆ ಅನ್ವಯಿಸಿ ಕ್ರಮ ಕೈಗೊಳ್ಳಬೇಕೆಂಬ ಕೂಗು ಬಲವಾಗಿದೆ.