

ಆನೇಕಲ್: ಡೆಂಕಣಿಕೋಟೆ ಸಮೀಪದ ಕೆಲಮಂಗಲ ಗ್ರಾಮಕ್ಕೆ ಹೊಂದಿಕೊಂಡಿರುವ ಒಂಕಿಕರಿಕೈ ಗ್ರಾಮದ ನಾಗಮನೇಶ್ವರ ಸ್ವಾಮಿ ದೇವಾಲಯದ ಬಳಿ ಶುಕ್ರವಾರ ಕಾಡಾನೆ ತುಳಿದು ಕುರಿಗಾಹಿ ಮಹಿಳೆ ಮೃತಪಟ್ಟಿದ್ದಾರೆ, ಕೆಲಮಂಗಲ ಗ್ರಾಮದ ನಾಗಮ್ಮ(60) ಮೃತೆ.
ನಾಗಮ್ಮ ಕುರಿ ಹಾಗೂ ಮೇಕೆಯನ್ನು ಕಾಯಲು ದೇವಾಲಯದ ಬಳಿ ಬಂದಿದ್ದರು, ಆಹಾರ ಅರಸಿ ಕಾಡಿನಿಂದ ಬಂದಿದ್ದ ಆನೆಯನ್ನು ನಾಗಮ್ಮ ನೋಡಿರಲಿಲ್ಲ. ಏಕಾಏಕಿ ನಾಗಮ್ಮನ ಮೇಲೆ ದಾಳಿ ಮಾಡಿ ತುಳಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಪದೇಪದೆ ಕಾಡಾನೆ ದಾಳಿಗೆ ಜನ ಸಂಕಷ್ಟಕ್ಕೆ ಸಿಲುಕಿದ್ದು, ಆನೆಗಳು ನಾಡಿಗೆ ಬರೆದಂತೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳು ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.