ಕಾಡಾನೆ ದಾಳಿಯಿಂದ ಕುರಿಗಾಯಿಗೆ ಗಾಯ

08 HANUR 4
ಕೊಪ್ಪ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಾದೇವಗೌಡ ಗಾಯಗೊಂಡಿರುವುದು.
Published on

ಹನೂರು: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಂಗಳವಾರ ಮೇಕೆಗಳನ್ನು ಮೇಯಿಸುತ್ತಿದ್ದ ಕುರಿಗಾಹಿ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದೆ.

ಗ್ರಾಮದ ಮಾದೇವಗೌಡ (65) ಗಾಯಗೊಂಡವರು. ಇವರು ಬೆಳಗ್ಗೆ 11 ಗಂಟೆಯಲ್ಲಿ ಜಮೀನಿನ ಸಮೀಪ ಮೇಕೆಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅರಣ್ಯದಿಂದ ಬಂದ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾಲು ಮುರಿದಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆದರೆ ಅಧಿಕಾರಿಗಳು ಸ್ಥಳಕ್ಕಾಮಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗಾಯಾಳುವನ್ನು ಕಾರಿನ ಮೂಲಕ ಕೂಡಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗೆ ತಮಿಳುನಾಡಿಗೆ ಕರೆದೊಯ್ಯಲಾಯಿತು.

ಕಡಿವಾಣಕ್ಕೆ ಒತ್ತಾಯ: ಈ ಭಾಗದಲ್ಲಿ ಇತ್ತೀಚೆಗೆ ಕಾಡಾನೆಯೊಂದರ ಹಾವಳಿ ಹೆಚ್ಚಾಗಿದೆ. ಕಳೆದ ತಿಂಗಳು ಗಾಜನೂರು ಗ್ರಾಮದ ಮಾದೇಶ್ ಅವರ ಮೇಲೆ ದಾಳಿ ನಡೆಸಿ ಕೈಯನ್ನು ಗಾಯಗೊಳಿಸಿತ್ತು. ಜು.3 ರಂದು ಗ್ರಾಮದ ಬಸವಣ್ಣ ಹಾಗೂ ಗೋವಿಂದ ಜಮೀನಿಗೆ ಲಗ್ಗೆ ಇಟ್ಟು ಮುಸುಕಿನ ಜೋಳ, ಬಾಳೆ ಫಸಲನ್ನು ನಾಶಪಡಿಸಿತ್ತು. ಇದೀಗ ಕುರಿ ಮೇಯಿಸುತ್ತಿದ್ದ ವೃದ್ಧನ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆ ಹಾವಳಿ ನಿಯಂತ್ರಿಸಲು ಕ್ರಮವಹಿಸಬೇಕು. ಗಾಯಾಳುವಿಗೆ ಚಿಕಿತ್ಸೆ ಹಾಗೂ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಭಾರತೀಯ ಕಿಸಾನ್ ಸಂಘದ ಗಾಜನೂರು ಗ್ರಾಮ ಘಟಕದ ಅಧ್ಯಕ್ಷ ನಾಗರಾಜು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net