

ಮೈಸೂರು: ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಆನೇಕಲ್ ತಾಲೂಕಿನ ಕಗ್ಗಲೀಪುರದ ರಾಮಚಂದ್ರರೆಡ್ಡಿ ಅವರ ಹಸು 42.840 ಲೀಟರ್ ಹಾಲು ಕರೆದು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ಚನ್ನರಾಯಪಟ್ಟಣ ತಾಲೂಕಿನ ತೋಟಿಗ್ರಾಮದ ಬಾಬು ಎಂಬುವರ ಹಸು 2ನೇ ಬಹುಮಾನ ಪಡೆದಿದೆ.
ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಉಪ ಸಮಿತಿ ಹಾಗೂ ಪಶು ಸಂಗೋಪನಾ ಇಲಾಖೆ ವತಿಯಿಂದ ನಗರದ ಜೆ.ಕೆ.ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಅಂದಾಜು 40 ಎಚ್‌ಎಫ್ ಎಕ್ಸ್ ತಳಿಯ ಹಸುಗಳನ್ನು ಗೋಪಾಲಕರು ಕರೆತಂದಿದ್ದರು.
2 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಆರಂಭದಲ್ಲಿ ಬಹುತೇಕ ಹಸುಗಳು ಬೆಳಗ್ಗೆ 20 ಲೀಟರ್ ಹಾಲು ಕರೆಯುತ್ತಿದ್ದವು. ಅವುಗಳಲ್ಲಿ ಕೆಲವು ಸಂಜೆ ವೇಳೆಗೆ ಕಡಿಮೆ ಪ್ರಮಾಣದ ಹಾಲು ಕರೆದ ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಸುತ್ತಿಗೆ ಕೇವಲ ಏಳು ಹಸುಗಳನ್ನು ಮಾತ್ರ ಆಯ್ದುಕೊಳ್ಳಲಾಯಿತು. ಸೋಮವಾರ ಬೆಳಗ್ಗೆ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ ಎಲ್ಲ 8 ಹಸುಗಳು 16 ಲೀಟರ್‌ನಿಂದ 22 ಲೀಟರ್‌ವರೆಗೂ ಹಾಲು ಕರೆದವು. ಸಂಜೆ ವೇಳೆ ನಡೆದ ಮತ್ತೊಂದು ಸುತ್ತಿನ ಸ್ಪರ್ಧೆಯಲ್ಲಿ 14ರಿಂದ 20 ಲೀಟರ್‌ವರೆಗೆ ಹಾಲು ಕರೆದವು. ಅಂತಿಮವಾಗಿ ಪ್ರಥಮ 4 ಹಸುಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಯಿತು.
ಆನೇಕಲ್ ತಾಲೂಕಿನ ಕಗ್ಗಲೀಪುರದ ರಾಮಚಂದ್ರ ರೆಡ್ಡಿ ಅವರ ತನುಷ್ ಡೇರಿ ಫಾರಂಗೆ ಸೇರಿದ ಹಸು ಬೆಳಗ್ಗೆ 22.800 ಲೀಟರ್, ಸಂಜೆ 20.040 ಲೀಟರ್‌ನೊಂದಿಗೆ ದಿನಕ್ಕೆ 42.840 ಲೀಟರ್ ಹಾಲು ಕರೆದು ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು. 2ನೇ ಸ್ಥಾನ ಪಡೆದ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ತೋಟಿಗ್ರಾಮದ ಬಾಬು ಅವರ ಹಸು ಬೆಳಗ್ಗೆ 22.560 ಲೀ, ಸಂಜೆ 19.740 ಲೀಟರ್ ಹಾಲಿನೊಂದಿಗೆ 42.300 ಲೀಟರ್ ಹಾಲು ಕರೆಯಿತು. ಆನೇಕಲ್ ತಾಲೂಕಿನ ದೊಮ್ಮಸಂದ್ರದ ನಕುಂದಿ ಗ್ರಾಮದ ಅಜಯ್ ಪಿ.ರೆಡ್ಡಿ ಅವರ ಅಜಯ್ ವೆಟ್ ಫಾರಂನ ಹಸು ಬೆಳಗ್ಗೆ 21.610 ಲೀಟರ್, ಸಂಜೆ 19.690 ಲೀಟರ್ ಹಾಲಿನೊಂದಿಗೆ 41.300 ಲೀಟರ್ ಹಾಲು ಕರೆದು 3ನೇ ಸ್ಥಾನ ಪಡೆಯಿತು.
ಎಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ದೇವರಾಜ್ ಎಂಬುವರ ಎಜಿಎಂ ಫಾರಂಗೆ ಸೇರಿದ ಹಸು ಬೆಳಗ್ಗೆ 20.830 ಲೀಟರ್, ಸಂಜೆ 19.750 ಲೀಟರ್ ಹಾಲು ಕರೆದು, ದಿನವೊಂದಕ್ಕೆ 40.580 ಲೀಟರ್ ಹಾಲು ಕರೆದ 4ನೇ ಬಹುಮಾನ ಗಿಟ್ಟಿಸಿಕೊಂಡಿತು.
ಉಳಿದಂತೆ ಗಾಯತ್ರಿಪುರಂ ಸತೀಶ್‌ಕುಮಾರ್ ಅವರ ಹಸು 38.350 ಲೀಟರ್, ಹಿನಕಲ್ ಧನ್ಯಸಿರಿ ಡೇರಿ ಫಾರಂನ ಎಸ್.ಮಹೇಶ್ ಅವರ ಹಸು 36.150 ಲೀಟರ್, ನೆಲಮಂಗಲದ ಭಕ್ತನಪಾಳ್ಯದ ಮುನಿರಾಜು ಎಂಬುವರ ಶ್ರೀ ಲಕ್ಷ್ಮೀ ಡೇರಿ ಫಾರಂಗೆ ಸೇರಿದ ಹಸು 31.170 ಲೀಟರ್ ಹಾಲು ಕರೆದು 7ನೇ ಸ್ಥಾನ ಪಡೆಯಿತು.
ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಕ್ರಮವಾಗಿ 1 ಲಕ್ಷ ರೂ., 80 ಸಾವಿರ ರೂ., 60 ಸಾವಿರ ರೂ. ನೀಡಲಾಯಿತು. 4ನೇ ಸ್ಥಾನ ಪಡೆದವರಿಗೆ 40 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ಪ್ರಥಮ ಸ್ಥಾನ ಪಡೆದ ರಾಮಚಂದ್ರರೆಡ್ಡಿ ಮಾತನಾಡಿ, 4 ವರ್ಷದಿಂದ ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ವಿವಿಧೆಡೆ ನಡೆದ ಮಿಲ್ಕ್ ಶೋಗಳಲ್ಲಿ ಭಾಗವಹಿಸುವುದೇ ಹವ್ಯಾಸವಾಗಿದೆ. ನಮ್ಮ ಫಾರಂನಲ್ಲಿ 80 ಹಸು ಸಾಕಿದ್ದು, ರಾಜ್ಯದಲ್ಲಿ ನಡೆಯುವ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸಲಾಗುತ್ತಿದೆ. ಎಚ್‌ಎಫ್, ಜರ್ಸಿ, ಸಾಯ್‌ವಾನ್ ತಳಿಯ ಹಸುಗಳು ಸಾಕಿದ್ದೇನೆ. ಈ ಬಾರಿ ನಮ್ಮ ಹಸುವಿಗೆ ಪ್ರಥಮ ಬಹುಮಾನ ಬಂದಿರುವುದಕ್ಕೆ ಆನಂದವಾಗಿದೆ ಎಂದರು.