ವಿದ್ಯಾವರ್ಧಕ ವಿದ್ಯಾರ್ಥಿಗಳಿಗೆ ಒಲಿದ ಅಂತಾರಾಷ್ಟ್ರೀಯ ಪ್ರಶಸ್ತಿ

vidyavardhaka college
Published on

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಮೆರಿಕದ ಫ್ಲೋರಿಡಾದ ಲೇಕ್‌ಲ್ಯಾಂಡ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ರೇಡಿಯೋ ನಿಯಂತ್ರಿತ (ಆರ್‌ಸಿ) ವಿಮಾನ ವಿನ್ಯಾಸ, ನಿರ್ಮಾಣ ಮತ್ತು ಹಾರಾಟ ಸ್ಪರ್ಧೆಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ.

ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಶ್ರೀನಂದನ ವೈ. ಶಾಸ್ತ್ರಿ, ವಿವೇಕ್ ಚಂದ್ರಶೇಖರ್, ಸಾತ್ವಿಕ್ ಜೈನ್, ಎಸ್. ಸುಪ್ರೀತ್, ಸುಖಿ ದರ್ಶನ್ ಈ ರೇಡಿಯೋ ನಿಯಂತ್ರಿತ ‘ಮೈಕ್ರೋ ಕ್ಲಾಸ್ ಆರ್‌ಸಿ’ ವಿಮಾನ ನಿರ್ಮಾಣ ಮಾಡಿದ್ದರು.

7ನೇ ಸ್ಥಾನ ಪಡೆದ ವಿದ್ಯಾವರ್ಧಕ

ಯುಎಸ್‌ಎನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪೋಲ್ಯಾಂಡ್‌ನ ರೊಕ್ಲಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಮತ್ತು ವಾರ್ಸಾ ವಿಶ್ವವಿದ್ಯಾಲಯ, ಚೀನಾದ ನಾಂಜಿಂಗ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿ ವಿಶ್ವವಿದ್ಯಾಲಯ ಸೇರಿದಂತೆ ವಿಶ್ವದ ವಿವಿಧ ವಿಶ್ವ ವಿದ್ಯಾಲಯ ಹಾಗೂ ಕಾಲೇಜುಗಳ 11 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಗೊಂಡಿತ್ತು. ಈ ಪೈಕಿ ವಿದ್ಯಾವರ್ಧಕ ಕಾಲೇಜು 7ನೇ ಸ್ಥಾನ ಪಡೆದುಕೊಂಡಿತು.

ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ತಂಡಗಳು

ಸ್ಪರ್ಧೆಗೆ 50ಕ್ಕೂ ಹೆಚ್ಚು ತಂಡಗಳು ಹೆಸರು ನೋಂದಾಯಿಸಿದ್ದವು. ಹೆಸರಾಂತ ವಾಯುಯಾನ ಕಂಪನಿಗಳಾದ ಲಾಕ್‌ಹೀಡ್ ಮಾರ್ಟಿನ್, ಬೋಯಿಂಗ್, ಸಾಲಿಡ್ ವರ್ಕ್ಸ್ ತಜ್ಞರು ಮತ್ತು ಪ್ರಮುಖ ಇಂಜಿನಿಯರ್ಗಳು ವಿದ್ಯಾರ್ಥಿಗಳ ನೈಪುಣ್ಯಯನ್ನು ನಿರ್ಣಯಿಸಿದರು.

ಸ್ಪರ್ಧೆಯ ಸಮಯದಲ್ಲಿ ವಿಮಾನ ಹಾರುವ ಕಾರ್ಯಕ್ಷಮತೆ, ಪೇಲೋಡ್ ಸಾಗಿಸುವ ಸಾಮರ್ಥ್ಯ, ತಾಂತ್ರಿಕತೆಯನ್ನು ತಿಳಿಸುವಂತಹ ಮಾನದಂಡಗಳು, ಮೌಖಿಕ ಪ್ರಸ್ತುತಿ ಮತ್ತು ವಿನ್ಯಾಸ ವರದಿ ಸೇರಿದಂತೆ ವಿವಿಧ ಅಂಶಗಳನ್ನು ಮೌಲ್ಯ ಮಾಪನ ಮಾಡಲಾಯಿತು.

ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ, ವಿಭಾಗದ ಮುಖ್ಯಸ್ಥ ಡಾ. ಜಿ.ವಿ. ನವೀನ್ ಪ್ರಕಾಶ್, ಪ್ರಾಧ್ಯಾಪಕ ಡಾ. ಆರ್. ಶಿವಶಂಕರ ಹಾಗೂ ಇತರರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net