

ನರೇಗಲ್ಲ: ಪಟ್ಟಣದ ಮಾರಿಕಾಂಬಾ ದೇವಸ್ಥಾನ ಪಕ್ಕದಲ್ಲಿನ ವಿದ್ಯುತ್ ಕಂಬ ಮಂಗಳವಾರ ಬೆಳಗ್ಗೆ ಧರೆಗುರುಳಿದ ಪರಿಣಾಮ ನಿವಾಸಿಯೊಬ್ಬರು ಗಾಯಗೊಂಡಿದ್ದಾರೆ. ಅದೃಷ್ಟಾವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಮಾರಿಕಾಂಬ ದೇವಸ್ಥಾನ ಪಕ್ಕದಲ್ಲಿ ಚರಂಡಿ ಕಾಮಗಾರಿ ನಡೆದಿದ್ದು, ಚರಂಡಿಗೆ ಹೊಂದಿಕೊಂಡಂತೆ ವಿದ್ಯುತ್ ಕಂಬವಿದೆ. ಕಂಬವು ಬಾಗಿದ್ದು, ಆಗಲೂ ಈಗಲೂ ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ಬದಲಿಸುವಂತೆ ಸ್ಥಳೀಯರು ಹೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು. ಕಂಬದ ಬುಡದಲ್ಲಿಯೇ ಚರಂಡಿ ನಿರ್ಮಾಣ ಮಾಡಿದ ಪರಿಣಾಮ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳೀಯರಾದ ಅನಿಲ ಹೊಸಳ್ಳಿ ಅವರ ಮೊಣಕಾಲು, ಬೆನ್ನಿಗೆ ಗಾಯಗಳಾಗಿವೆ. ಬೆಳಗಿನ ಜಾವದಲ್ಲಿ ಈ ಘಟನೆ ನಡೆದಿದ್ದು, ಹೆಚ್ಚಿನ ಅಪಾಯವಾಗಿಲ್ಲ.