

ಮುಳಬಾಗಿಲು: ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಚುನಾವಣೆಗೂ ಮುನ್ನ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಂತೆ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗೃಹಜ್ಯೋತಿಯಡಿ 200 ಯೂನಿಟ್ ವಿದ್ಯುತ್ ಎಲ್ಲರಿಗೂ ಫ್ರೀ, ನನಗೂ ಫ್ರೀ ನಿನಗೂ ಫ್ರೀ, ಕಾಕಾ ಪಾಟೀಲ್ಗೂ ಫ್ರೀ, ಮಹದೇವಪ್ಪನಿಗೂ ಫ್ರೀ ಎಂದು ಹೇಳಿರುವುದು ಸತ್ಯ. ಆದರೆ ಸಣ್ಣ ಪ್ರಮಾಣದ ವಿದ್ಯುತ್ ಬಳಸುವ ಗ್ರಾಹಕರ ಜೇಬಿಗೆ ಈಗ ಕತ್ತರಿ ಹಾಕಲಾಗುತ್ತಿದ್ದು, ಬೆಸ್ಕಾಂ ಮೂಲಕ ಕೊಟ್ಟು, ಕಿತ್ತುಕೊಳ್ಳು ಚಾಳಿ ಶುರುಮಾಡಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಗೃಹ ಜ್ಯೋತಿಯು ಮೂಗಿಗೆ ತುಪ್ಪ ಸವರಿದಂತಾಗಿದೆ. ಉಚಿತ ಬಿಲ್ ಬಗ್ಗೆ ಬೆಸ್ಕಾಂ ಕಚೇರಿಗೆ ಹೋಗಿ ಪ್ರಶ್ನೆ ಮಾಡಿದರೆ ನಿಮಗೆ ಇಷ್ಟು ಯೂನಿಟ್ ಮಾತ್ರ ಉಚಿತ, ಉಳಿದ ಹೆಚ್ಚುವರಿ ಯುನಿಟಿಗೆ ಬಿಲ್ ಖಚಿತ, ಪಾವತಿ ಮಾಡದಿದ್ದರೆ ಸಂಪರ್ಕ ಕಡಿತ ಎಂಬ ಮಾಹಿತಿಗೆ ಗ್ರಾಹಕರು ಕಂಗಾಲಾಗಿದ್ದಾರೆ.
ಬಹುತೇಕರಿಗೆ ಉಚಿತ ವಿದ್ಯುತ್ ಎಂಬದು ಮರೀಚಿಕೆಯಾಗಿದೆ, ಹಿಂದೆ ಬಳಸುತ್ತಿದ್ದ ವಿದ್ಯುತ್ ಪ್ರಮಾಣದಂತೆ ಈಗಲೂ ಬಳಕೆ ಮಾಡುತ್ತಿದ್ದು, 200 ಯೂನಿಟ್ ಕಳೆದರೂ ಕಡಿಮೆ ಬಿಲ್ ಬರಬೇಕಿತ್ತು. ಆದರೆ, ಫ್ರೀ ಯೂನಿಟ್ ಕಳೆದೂ ಮೊದಲಿಗಿಂತಲೂ ಹೆಚ್ಚು ಬಿಲ್ ಬರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೇಸಿಗೆಯಲ್ಲಿ ಫ್ಯಾನ್, ವಾಟರ್ ಫಿಲ್ಟರ್ ಮತ್ತಿತರ ಬಳಕೆಯಿಂದ ಪ್ರತಿ ತಿಂಗಳು ಉದಾಹರಣೆಗೆ ಆರ್ಆರ್. ಸಂಖ್ಯೆ ಎಂ.ಬಿ 23578ಗೆ ಫೆಬ್ರವತಿಯಲ್ಲಿ 79 ಯುನಿಟ್ ಬಿಲ್ ಬಂದಿದ್ದು, ಇದರಲ್ಲಿ ಉಚಿತ ವಿದ್ಯುತ್ತಿಗೆ 53 ಯೂನಿಟ್ ಮಾತ್ರ ಅರ್ಹವಾಗಿದ್ದು, 26 ಯೂನಿಟ್ಗೆ ಹಣ ಪಾವತಿ ಮಾಡಬೇಕಾಗಿದೆ. ಈ ಹಣ ರೂ.175.27 ಪೈಸೆ ಪಾವತಿಸಬೇಕಿದೆ
ಜತೆಗೆ ಮುಂದಿನ ತಿಂಗಳಿಂದ ಯೂನಿಟ್ಗೆ 0.36 ಪೈಸೆ ಹೆಚ್ಚಿಸಲು ಇಲಾಖೆ ಸಿದ್ಧತೆ ನಡೆಸಿದ್ದು, ಏಪ್ರಿಲ್ ಬಿಲ್ ಗೃಹಜ್ಯೋತಿ ಗ್ರಾಹಕರ ಕೈ ಸುಡುವುದು ಖಚಿತವಾಗಿದೆ. ಗೃಹಜ್ಯೋತಿ ವಿದ್ಯುತ್ ಬಳಸುವ ಬಹುತೇಕ ಗ್ರಾಹಕರಿಗೆ 200 ಯೂನಿಟ್ ಬೇಡ, 100 ಯೂನಿಟ್ ಉಚಿತ ನೀಡಿದರೂ ಕಡಿಮೆ, ವಿದ್ಯುತ್ ಬಳಸುವ ಶೇ.-80 ಗ್ರಾಹಕರಿಗೆ ಅನುಕೂಲ ಆಗುತ್ತದೆ ಎಂಬುದು ಸರ್ಕಾರಕ್ಕೂ ತಿಳಿದಿದ್ದರೂ ಒಂದು ಕೈಯಲ್ಲಿ ಉಚಿತ ವಿದ್ಯುತ್ ಕೊಟ್ಟು ಮತ್ತೊಂದು ಕೈಯಲ್ಲಿ ಪರೋಕ್ಷವಾಗಿ ತೆಗೆದುಕೊಳ್ಳುವ ಕಳ್ಳಾಟ ನಡೆಯುತ್ತಿದೆ. ಗ್ರಾಹಕನಿಗೆ ಅರ್ಧ ಉಚಿತ, ಅರ್ಧಕ್ಕೆ ಬಿಲ್ಲು ಎಂದು ಹೇಳಿದರೂ ವಿದ್ಯುತ್ ದರ ಏರಿಕೆಯಿಂದ ಕಾಂಗ್ರೆಸ್ ಸರ್ಕಾರ ಬರುವುದಕ್ಕಿಂತ ಮುಂಚೆ ಕಟ್ಟುತ್ತಿದ್ದ ಬಿಲ್ಗಿಂತಲೂ ಈಗ ಹೆಚ್ಚಿನ ಬಿಲ್ಲು ಕಟ್ಟುವ ದುಸ್ಥಿತಿ ಬಂದೊದಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಗ್ರಾಹಕ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸುವ ಹಿಂದಿನ ವರ್ಷ ಸರಾಸರಿ ವಿದ್ಯುತ್ ಬಳಕೆಯಂತೆ ಉಚಿತ ವಿದ್ಯುತ್ ಯೂನಿಟ್ ನಿಗದಿ ಮಾಡಲಾಗಿರುತ್ತದೆ. ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ ಯುನಿಟ್ಗೆ ಬಿಲ್ ಪಾವತಿ ಮಾಡಬೇಕು.
- ವಿ.ಎಂ. ರಮೇಶ್, ಎಇಇ, ಬೆಸ್ಕಾಂ ಮುಳಬಾಗಿಲು
ಸರ್ಕಾರ ಜನರಿಗೆ ಟೋಪಿ ಹಾಕಿ ಚುನಾವಣೆಯಲ್ಲಿ ಗೆದ್ದ ನಂತರ 200 ಯೂನಿಟ್ ಉಚಿತ ನೀಡುವುದರಲ್ಲಿ ಕನಿಷ್ಠ 100 ಯುನಿಟ್ ಸಹ ಬಹುತೇಕ ಗ್ರಾಹಕರಿಗೆ ಉಚಿತವಾಗಿ ಸಿಗುತ್ತಿಲ್ಲ. ಬೆಸ್ಕಾಂನಲ್ಲಿ ನಡೆಯುವ ಬಿಲ್ಲಿಂಗ್ ವ್ಯವಸ್ಥೆ ಜನಸಾಮಾನ್ಯರಿಗೆ ಅರ್ಥ ಆಗದಿರುವ ಮತ್ತು ಬೆಸ್ಕಾಂಗೆ ಭೇಟಿ ನೀಡಿ ಕೇಳಿದಾಗ ನಿಮಗೆ ಇಷ್ಟು ಯೂನಿಟ್ ಮಾತ್ರ ಉಚಿತ ಉಳಿದಿದ್ದಕ್ಕೆ ಪಾವತಿ ಮಾಡಬೇಕೆಂಬ ಉತ್ತರದಿಂದ ಜನಪ್ರಶ್ನೆ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರವನ್ನು ಕೇಳುವರೇ ಇಲ್ಲವಾಗಿದೆ.
- ಕೆ. ಅಮರೇಶ್, ಮಾಜಿ ಅಧ್ಯಕ್ಷ, ಬಿ.ಜೆ.ಪಿ. ನಗರ ಘಟಕದ, ಮುಳಬಾಗಿಲು