

ಕಡೂರು: ದಲಿತರ ಮೇಲೆ ದೌರ್ಜನ್ಯ ಎಸಗಿದ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಸವರ್ಣೀಯರಿಗೆ ಜೀವಾವಧಿ ಶಿಕ್ಷೆ ನೀಡಿರುವ ಜಿಲ್ಲಾ ನ್ಯಾಯಾಲಯದ ಆದೇಶ ಸ್ವಾಗತಾರ್ಹ ಎಂದು ಜಿಲ್ಲಾ ದೌರ್ಜನ್ಯ ಸಮಿತಿ ನಿರ್ದೇಶಕ ಕೆ.ಎಸ್.ಶಂಕರ್ ಹೇಳಿದರು.
ಮರಕುಂಬಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ದಲಿತರ ಸವರ್ಣೀಯರ ನಡುವೆ ನಡೆದ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ 101 ಅಪರಾಧಿಗಳಲ್ಲಿ 98 ಅಪರಾಧಿಗಳಿಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಸರ್ಕಾರಗಳು ಅನೇಕ ದಲಿತರ ಪರ ಅನೇಕ ಕಾನೂನು ಮಾಡಿದರೂ ದಲಿತರ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ. ಇಂತಹ 10 ವರ್ಷದ ಪ್ರಕರಣಕ್ಕೆ ಸೂಕ್ತ ನ್ಯಾಯ ನೀಡಿರುವುದು ಕಾನೂನಿನ ಶಕ್ತಿ ಗಟ್ಟಿಗೊಳಿಸಿದಂತಾಗಿದೆ. ದಲಿತರು ಎಲ್ಲರೊಂದಿಗೆ ಸೌಜನ್ಯದಿಂದ ಬದುಕಲು ಪ್ರಯತ್ನ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ಈ ರೀತಿಯ ದೌರ್ಜನ್ಯಗಳು ಮರುಕಳಿಸಬಾರದು ಎಂದರು.