ಅಧಿಕಾರಿಗಳಿಗೇ ಆವಾಜ್ ಹಾಕಿದ್ದ ದಂಪತಿ ಬಂಧನ

IMG_20221216_193439
Published on


ಮೈಸೂರು:
ಬಾಕಿ ಉಳಿಸಿಕೊಂಡಿದ್ದ ಬಾಡಿಗೆಯನ್ನು ನೀಡುವಂತೆ ನೋಟಿಸ್ ನೀಡಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಬಹಿರಂಗವಾಗಿಯೇ ಮಚ್ಚು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದ ದಂಪತಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.


ಸಾತಗಳ್ಳಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕವಾಗಿಯೇ ಮಚ್ಚು ಹಿಡಿದಿದ್ದ ಕಾಂಗ್ರೆಸ್ ಮುಖಂಡ ಶಫೀಕ್ ಅಹಮದ್, ಈತನ ಪತ್ನಿ ಸೈಯದ್ ಮುನಿಬುನ್ನಿಸಾ ಅವರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ದಂಪತಿ ಸಾತಗಳ್ಳಿ ಬಸ್ ನಿಲ್ದಾಣದ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡು ಎರಡು ವರ್ಷಗಳಿಂದ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಡಿ.10ರಂದು ಬೆಳಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ಶಫೀಕ್ ಅಹಮ್ಮದ್ ಮತ್ತು ಸೈಯದ್ ಮುನಿಬುನ್ನಿಸಾ ಸೇರಿದಂತೆ ಮೂವರು ಮಹಿಳೆಯರು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಸೈಯದ್ ಮುನಿಬುನ್ನಿಸಾ ಮಚ್ಚು ಹಿಡಿದು ಕೊಲೆ ಬೆದರಿಕೆ ಹಾಕಿ ನಾಪತ್ತೆಯಾಗಿದ್ದರು ಎಂದರು.

ಈ ಸಂಬಂಧ ಕೆಎಸ್‌ಆರ್‌ಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಮರಿಗೌಡ ಉದಯಗಿರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಘಟನಾ ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಖಾಕಿ ಸಮವಸ್ತ್ರ ಧರಿಸಿದ್ದರಿಂದ ಪೊಲೀಸರ ಸಮ್ಮುಖದಲ್ಲೇ ಕೊಲೆ ಬೆದರಿಕೆ ನಡೆಯುತ್ತಿದೆ ಎಂದು ವಿಡಿಯೋ ತುಣುಕುಗಳನ್ನು ನೋಡಿ ಸಾರ್ವಜನಿಕರು ಭಾವಿಸಿದ್ದರು. ಬಳಿಕ ಡಿ.12ರಂದು ದೂರುದಾರರು ಘಟನೆಯ ವಿಡಿಯೋ ಚಿತ್ರಿಕರಣವನ್ನು ಪೊಲೀಸರಿಗೆ ನೀಡಿದ್ದರು. ಶುಕ್ರವಾರ ಮುಂಜಾನೆ ವಿರಾಜಪೇಟೆಯ ಗ್ರಾಮವೊಂದರಲ್ಲಿ ಆರೋಪಿಯಾದ ದಂಪತಿ ಇರುವುದನ್ನು ಖಚಿತಪಡಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ. ಜತೆಗೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರಿಬ್ಬರ ವಿರುದ್ಧ ರೌಡಿಶೀಟರ್ ಪಟ್ಟಿ ತೆರೆಯಲಾಗಿದೆ. ಉಳಿದ ಮೂವರು ಆರೋಪಿಗಳು ಬಂಧಿತರ ಸಂಬಂಧಿಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿ ಎಂ.ಎನ್. ಶಶಿಧರ್ ಇದ್ದರು.

ಮತ್ತೊಬ್ಬ ರೌಡಿಶೀಟರ್ ಗಡಿಪಾರು
ಮೈಸೂರು ನಗರ ಪೊಲೀಸರು ಗುರುವಾರ ಬನ್ನಿಮಂಟಪದ ಆರ್‌ಎಕ್ಸ್ ಮನು ಎಂಬಾತನ್ನು ಮೈಸೂರು ನಗರದಿಂದ ಮಂಡ್ಯ ಜಿಲ್ಲೆಗೆ 3 ತಿಂಗಳು ಕಾಲ ಗಡಿಪಾರು ಮಾಡಿದ್ದ ಬೆನ್ನಲ್ಲೇ ಶುಕ್ರವಾರ ಮತ್ತೊಬ್ಬ ರೌಡಿಶೀಟರ್‌ನನ್ನು ಗಡಿಪಾರು ಮಾಡಿದ್ದಾರೆ.
ಗೌಸಿಯಾನಗರ ನಿವಾಸಿ ಅಕ್ಮಲ್ ಪಾಷ (34) ಎಂಬಾತನ ವಿರುದ್ಧ ಈಗಾಗಲೇ 9 ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದಾನೆ. ಆದರೂ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ ಹಿನ್ನೆಲೆ 6 ತಿಂಗಳುಗಳ ಕಾಲ ರಾಮನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು. ನಗರದೆಲ್ಲೆಡೆ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗಿರುವುದು ಕಂಡು ಬಂದಿದೆ. ಯಾವುದೇ ಭಯವಿಲ್ಲದೇ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ವಾಹನಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಇದರೊಂದಿಗೆ ಮೈಸೂರಿನಿಂದ ತೆರಳಿದ್ದ ಶಂಕಿತ ಉಗ್ರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ್ದರಿಂದ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net