ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಮದುವೆಯಾದ ಜೋಡಿ, ರಕ್ಷಣೆಗೆ ಪೊಲೀಸರ ಮೊರೆ

IMG-20240729-WA0028.jpg
Published on

ಬೆಳಗಾವಿ: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಪರಸ್ಪರ ಪ್ರೀತಿಸಿ ಮದುವೆಗೆ ಮುಂದಾಗಿದ್ದ ಯುವಕ, ಯುವತಿಯು ಕುಟುಂಬಸ್ಥರಿಂದ ರಕ್ಷಣೆ ಕೋರಿ ಒಂದೂವರೆ ತಿಂಗಳ ಹಿಂದೆ ಖಾನಾಪುರ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ, ಸೋಮವಾರ ಪಾರಿಶ್ವಾಡದ ದೇವಸ್ಥಾನವೊಂದರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರ ಬಳಿ ಬಂದು ರಕ್ಷಣೆ ನೀಡುವಂತೆ ಕೋರಿದ್ದಾರೆ. ಜೀವಭಯವಿದೆ ರಕ್ಷಣೆ ಕೊಡಿ ಎಂದೂ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು, ರಕ್ಷಣೆ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆಸ್ತಿ ದಾಖಲೆಗಳಿಗೆ ಸಂಬಂಧಿಸಿದಂತೆ ಸಂಬಂಧಿತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಬೆಂಗಳೂರಿನ ಯುವತಿ ಪ್ರಿಯಾಂಕ ಹಾಗೂ ಬೆಳಗಾವಿ ತಾಲೂಕಿನ ಅಲಾರವಾಡದ ಯುವಕ ರೋಹಿತ ತಮ್ಮ ಮದುವೆಗೆ ರಕ್ಷಣೆ ನೀಡುವಂತೆ ಕೋರಿ ಇನ್‌ಸ್ಟಾಗ್ರಾಂ ಮೂಲಕ ಖಾನಾಪುರ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿ ಕಳೆದು ಕೊಂಡಿರುವ ಯುವತಿ ಸೋದರ ಮಾವನ ಆಶ್ರಯದಲ್ಲಿ ಬೆಳೆದಿದ್ದಾಳೆ. ಯುವತಿ ತಂದೆ ಹೆಸರಲ್ಲಿ ಬೆಂಗಳೂರಿನಲ್ಲಿ ಮನೆ, ಕಾಂಪ್ಲೆಕ್ಸ್ ಹಾಗೂ ಶಿವಮೊಗ್ಗದಲ್ಲಿ ಮೂರು ಮನೆಗಳಿದ್ದು, ಎಲ್ಲವನ್ನೂ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ. ನನಗೆ 18 ವರ್ಷ ವಯಸ್ಸಾದ ಬಳಿಕ ಆಸ್ತಿಯ ಮಾಲೀಕತ್ವ ನನ್ನ ಹೆಸರಿಗೆ ವರ್ಗಾವಣೆಯಾಗಿದೆ. ಆಸ್ತಿ ಆಸೆಗಾಗಿ ಸೋದರ ಮಾವನ ಮಗ ಸುಧಾಕರ ಎಂಬಾತ ಬಲವಂತದಿಂದ ನನ್ನ ಆಧಾರ ಕಾರ್ಡ್‌ನಲ್ಲಿ ಹೆಸರು ಬದಲಾಯಿಸಿದ್ದಾನೆ. ನಾನು ಯುವಕನನ್ನು ಪ್ರೀತಿಸುವ ವಿಷಯ ತಿಳಿದು ನನ್ನನ್ನು ಗೃಹಬಂಧನದಲ್ಲಿಟ್ಟಿದ್ದರು ಎಂದು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೋಮವಾರ ಮದುವೆಯಾಗಿ ಎಸ್ಪಿ ಅವರ ಎದುರು ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆ ನೀಡುವುದಾಗಿ ಎಸ್ಪಿ ಅವರು ಭವರಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net