

ಶಿಗ್ಗಾಂವಿ: ಸಣ್ಣಪುಟ್ಟ ಮನಸ್ತಾಪಗಳಿಂದ ಬೇರ್ಪಟ್ಟಿದ್ದ ದಂಪತಿಗೆ ಪಟ್ಟಣದ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ನಸರತ್ ಮುಕ್ತಾರ ಅಹ್ಮದಖಾನ್ ಅವರು ಜೀವನದ ಕುರಿತು ತಿಳಿವಳಿಕೆ ನೀಡಿ ಮತ್ತೆ ಒಂದಾಗುವಂತೆ ಮಾಡಿದರು.
ಪಟ್ಟಣದ ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪರಸ್ಪರ ಒಂದಾದ ದಂಪತಿ, ನಾವು ಮತ್ತೆ ಯಾವತ್ತೂ ಜಗಳ ಆಡದಂತೆ ಜೀವನ ಸಾಗಿಸುತ್ತೇವೆ ಎಂದು ನ್ಯಾಯಾಧೀಶರ ಮುಂದೆ ಒಪ್ಪಿಕೊಂಡರು.
ನಂತರ ಮಾತನಾಡಿದ ನ್ಯಾಯಾಧೀಶರು ವಿವಾಹ ಸಂಬಂಧಿತ ಪ್ರಕರಣಗಳು, ಕಾರ್ಮಿಕ ವಿವಾದಗಳು, ಭೂಸ್ವಾಧೀನ ಸಂಘರ್ಷಗಳು, ಕ್ರಿಮಿನಲ್ ಪ್ರಕರಣಗಳು, ಕೌಟುಂಬಿಕ ಕಾನೂನು ವಿವಾದಗಳು, ದಿವಾಳಿತನ ಪ್ರಕರಣಗಳು ಮತ್ತು ಇತರ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಮಂಡಿಸಬಹುದಾಗಿದೆ ಎಂದರು.
ವಕೀಲರಾದ ಸಂತೋಷಗೌಡ ಪಾಟೀಲ, ಪಿ.ಆರ್. ಕಲ್ಯಾಣಿ, ಬಿ ಜಿ ರಾಗಿ, ವಿ.ಎಂ. ರಾಮಗೇರಿ, ವಿ.ಎಂ. ಗಾಣಗೇರ ಇತರರು ಇದ್ದರು.