

ಯಲ್ಲಾಪುರ: ಪಟ್ಟಣದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಶನಿವಾರ ನಡೆಯಿತು.
ಬೇರೆಯಾಗಿದ್ದ ದಂಪತಿಯನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಲಾಯಿತು. ಸರಸ್ವತಿ ಹುಲ್ಲೂರು ಹಾಗೂ ಮಂಜಪ್ಪ ಹುಲ್ಲೂರ ಎಂಬ ದಂಪತಿ ಬೇರೆಯಾಗಿದ್ದು, 2022ರಲ್ಲೇ ಜೀವನಾಂಶ ಕೋರಿ ಸರಸ್ವತಿ ಹುಲ್ಲೂರ ಪ್ರಕರಣ ದಾಖಲಿಸಿದ್ದರು. ನ್ಯಾಯವಾದಿ ಡಿ.ಕೆ. ಭಟ್ಟ ಸಹಸ್ರಳ್ಳಿ ಅವರು ಅರ್ಜಿದಾರರ ಪರ ವಕಾಲತ್ತು ವಹಿಸಿದ್ದರು. ಅಮೀನಾ ಶೇಖ್ ಸಂಧಾನಕಾರರಾಗಿ ಭಾಗವಹಿಸಿದ್ದರು.
ದಂಪತಿಗಳಿಗೆ ತಿಳಿವಳಿಕೆ ನೀಡಿ ಒಂದುಗೂಡಿಸಲಾಯಿತು. ಒಂದಾದ ದಂಪತಿಗೆ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ ಸಿಹಿ ನೀಡಿ ಅಭಿನಂದಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಹಳ್ಳಕಾಯಿ ನೇತೃತ್ವದಲ್ಲಿ 26 ಪ್ರಕರಣಗಳು ಇತ್ಯರ್ಥಗೊಂಡು, 43.49 ಲಕ್ಷ ರೂ ಭರಣ ಮಾಡಲಾಯಿತು. ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ ನೇತೃತ್ವದಲ್ಲಿ 137 ಪ್ರಕರಣ ಇತ್ಯರ್ಥಗೊಂಡು, 18.69 ಲಕ್ಷ ರೂ ಭರಣ ಮಾಡಲಾಯಿತು.